ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಪಿಯುಸಿ ಮುಗಿಸಿ ಕಂಪ್ಯೂಟರ್ ತರಗತಿಗೆ ಹೋಗುತ್ತಿದ್ದ ಯುವತಿಯೊಬ್ಬಳು ಬೆಡ್ ಮೇಲೆ ಗೊಂಬೆ ಮಲಗಿಸಿ ಮನೆ ಬಿಟ್ಟು ನಾಪತ್ತೆಯಾಗಿರುವ ಘಟನೆ ಹರಿಹರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೆಸ್ಕಾಂ ಅಧಿಕಾರಿಯ ಪುತ್ರಿಯಾಗಿರುವ ಯುವತಿ, ತಂದೆಗೆ ಅನುಮಾನ ಬಾರದಂತೆ ತನ್ನ ಹಾಸಿಗೆಯಲ್ಲಿ ದೊಡ್ಡ ಗೊಂಬೆಯೊಂದನ್ನು ಮಲಗಿಸಿ ಅದರ ಮೇಲೆ ಬೆಡ್‌ಶೀಟ್ ಹೊದಿಸಿ ಮನೆಯಿಂದ ತೆರಳಿದ್ದಾಳೆ ಎನ್ನಲಾಗಿದೆ. ಬೆಳಿಗ್ಗೆ ಮಗಳು ಮಲಗಿದ್ದಾಳೆ ಎಂದು ಭಾವಿಸಿದ್ದ ತಂದೆಗೆ ಬಳಿಕ ಆಘಾತಕಾರಿ ಸಂಗತಿ ಗೊತ್ತಾಗಿದೆ.

ಆಕೆಗೆ ಪೋಷಕರು ಮೊಬೈಲ್ ಕೊಡಿಸಿರಲಿಲ್ಲ. ಆದರೆ, ಇತ್ತೀಚೆಗೆ ಆಕೆಯ ಬಳಿ ಒಂದು ರಹಸ್ಯ ಮೊಬೈಲ್ ಫೋನ್ ಇರುವುದು ತಂದೆಯ ಗಮನಕ್ಕೆ ಬಂದಿತ್ತು. ಅದರ ಬಗ್ಗೆ ವಿಚಾರಿಸಿದಾಗ ಆಕೆ ಯಾರ ಫೋನ್ ಎಂದು ಹೇಳುತ್ತಿರಲಿಲ್ಲ ಹಾಗೂ ನಂಬರ್ ಕೂಡ ನೀಡದೆ ಮುಚ್ಚಿಟ್ಟಿದ್ದಳು ಎನ್ನಲಾಗಿದೆ.
ಇದೀಗ ಆಕೆ ಅದೇ ಮೊಬೈಲ್ ಮೂಲಕ ಯಾರನ್ನೋ ಸಂಪರ್ಕಿಸಿ, ಪೂರ್ವಯೋಜಿತವಾಗಿ ಮನೆ ಬಿಟ್ಟು ಹೋಗಿರಬಹುದು ಎಂದು ಶಂಕಿಸಲಾಗಿದೆ.

ಈ ಕುರಿತು ಹರಿಹರಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಯುವತಿಯ ಪತ್ತೆಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.














