ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಸಾಗರ ತಾಲ್ಲೂಕಿನ ಮಾವಲಿ ಗ್ರಾಮದಲ್ಲಿ ಅರಣ್ಯ ಇಲಾಖೆಯ ಭೂಮಿಯನ್ನು ಅಕ್ರಮವಾಗಿ ಬಳಕೆ ಮಾಡಿಕೊಂಡ ಆರೋಪದ ಹಿನ್ನೆಲೆಯಲ್ಲಿ ಕೆಳದಿ ಶಾಖೆಯ ಉಪವಲಯ ಅರಣ್ಯಾಧಿಕಾರಿ (ಡಿಆರ್‌ಎಫ್‌ಒ) ಜೆ.ವಿಜಯಕುಮಾರ್ ಹಾಗೂ ಗಸ್ತು ಅರಣ್ಯ ಪಾಲಕ ಶಿವನಗೌಡ ದೊಡ್ಡಬಸಪ್ಪನವರ್ ಅವರನ್ನು ಅಮಾನತುಗೊಳಿಸಲಾಗಿದೆ.
ಮಾವಲಿ ಗ್ರಾಮದ ಸರ್ವೆ ನಂ. 43ರ ಅರಣ್ಯ ಇಲಾಖೆಯ ಭೂಮಿಯಲ್ಲಿ (ನೆಡುತೋಪು ಮತ್ತು ಸೊಪ್ಪಿನಬೆಟ್ಟ ಪ್ರದೇಶ) ಜೆ.ಸಿ.ಬಿ ಯಂತ್ರಗಳನ್ನು ಬಳಸಿ ನಿಯಮಬಾಹಿರವಾಗಿ ರಸ್ತೆ ನಿರ್ಮಿಸಲಾಗಿದೆ. ಅಲ್ಲದೆ, ಅರಣ್ಯ ಇಲಾಖೆಯೇ ಬೆಳೆಸಿದ್ದ ನೂರಾರು ಅಕೇಶಿಯಾ ಮತ್ತು ಇತರ ಕಾಡು ಮರಗಳನ್ನು ಅಕ್ರಮವಾಗಿ ಕಡಿದು ಸಾಗಣೆ ಮಾಡಲಾಗಿದೆ ಎಂಬ ದೂರನ್ನು ಆಧರಿಸಿ ಶಿವಮೊಗ್ಗ ಅರಣ್ಯ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ.ಹನುಮಂತಪ್ಪ ಬುಧವಾರ ಈ ಆದೇಶ ಹೊರಡಿಸಿದ್ದಾರೆ.

ದೋಷಪೂರಿತ ಎಫ್.ಐ.ಆರ್ ದಾಖಲು:
ದೂರಿನ ಅನ್ವಯ ಮೇ 6ರಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ದೂರು ಸಲ್ಲಿಕೆಯಾಗಿತ್ತು. ತನಿಖೆಯ ವೇಳೆ, ಅರಣ್ಯ ಅಪರಾಧ ಪ್ರಕರಣವನ್ನು ದಾಖಲಿಸುವಾಗ ಘಟನೆ ನಡೆದ ಸ್ಥಳವು ‘ಅರಣ್ಯದ ಹೊರಗೆ’ ಎಂದು ತಪ್ಪಾಗಿ ನಮೂದಿಸಿರುವುದು ಪತ್ತೆಯಾಗಿದೆ. ಆರೋಪಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ರೀತಿ ದೋಷಪೂರಿತ ಎಫ್.ಐ.ಆರ್ ದಾಖಲಿಸಲಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ ಸಚಿವರ ಕಚೇರಿಯಿಂದ ಶಿಸ್ತುಕ್ರಮಕ್ಕೆ ಸೂಚಿಸಲಾಗಿತ್ತು.

















