ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಮಕ್ಕಳ ಬೇಸಿಗೆ ರಜೆಯ ವಿಚಾರಕ್ಕೆ ಶುರುವಾದ ಗಲಾಟೆ ತಾರಕಕ್ಕೇರಿ ಪೊಲೀಸ್ ಅಧಿಕಾರಿಯ ಪತ್ನಿಯೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಫಿನಾಡಿನಲ್ಲಿ ಸಂಭವಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪಟ್ಟಣದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ಕರ್ತವ್ಯನಿರತ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅವರ ಪತ್ನಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೀರೂರು ಪೊಲೀಸ್ ಠಾಣೆಯ ಪಿಎಸ್‌ಐ ಆಗಿ ಕಾರ್ಯನಿರ್ವಹಿಸುತ್ತಿರುವ ತಿಪ್ಪೇಶ್ ಅವರ ಪತ್ನಿ ಪದ್ಮ (34) ಎಂಬುವವರೇ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡ ದುರ್ದೈವಿ. ಮೂಲತಃ ತುಮಕೂರು ಜಿಲ್ಲೆಯವರಾದ ಪದ್ಮ ಮತ್ತು ದಾವಣಗೆರೆ ಮೂಲದ ತಿಪ್ಪೇಶ್ ಅವರು ಈ ಹಿಂದೆ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು.

ಮಕ್ಕಳಿಗೆ ಶಾಲಾ ರಜೆ ಇರುವುದರಿಂದ ಅವರನ್ನು ತಮ್ಮೂರಿನ ಕಡೆಗೆ ಕರೆದುಕೊಂಡು ಹೋಗುವಂತೆ ಅಥವಾ ಕಳಿಸಿಕೊಡುವಂತೆ ಪದ್ಮ ಅವರು ಪತಿಯ ಬಳಿ ಒತ್ತಾಯಿಸಿದ್ದರು ಎನ್ನಲಾಗಿದೆ. ಆದರೆ, ಇದೇ ವಿಚಾರವಾಗಿ ದಂಪತಿಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಪತಿಯು ಮಕ್ಕಳನ್ನು ಊರಿಗೆ ಕಳಿಸಲು ಒಪ್ಪಲಿಲ್ಲ ಎಂಬ ಆಕ್ರೋಶ ಪದ್ಮ ಅವರಲ್ಲಿ ಮನೆಮಾಡಿತ್ತು.

ಪತಿಯ ನಿರ್ಧಾರದಿಂದ ತೀವ್ರವಾಗಿ ಮನನೊಂದಿದ್ದ ಪದ್ಮ ಅವರು, ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ. 12 ವರ್ಷಗಳ ಹಿಂದೆ ಪ್ರೀತಿಸಿ ಅಂತರ್ ಜಾತಿ ಮದುವೆಯಾಗಿದ್ದ ಜೋಡಿಯಲ್ಲಿ ನಡೆದ ಸಣ್ಣ ಮನಸ್ತಾಪವೊಂದು ಸಾವಿನಲ್ಲಿ ಅಂತ್ಯವಾಗಿದೆ. ಇದರಿಂದಾಗಿ ಇಬ್ಬರು ಪುಟಾಣಿ ಮಕ್ಕಳು ಅಮ್ಮನನ್ನ ಕಳೆದುಕೊಂಡಿದ್ದಾರೆ.
ಬೀರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ.













