ಕಡೂರು: (ನ್ಯೂಸ್ ಮಲ್ನಾಡ್ ವರದಿ) ಕುಡಿತದ ಅಮಲಿನಲ್ಲಿ ಪತ್ನಿ ಹಾಗೂ ಮಗುವಿನ ಮೇಲೂ ವರದಕ್ಷಿಣೆಗಾಗಿ ನಿರಂತರ ಕಿರುಕುಳ ನೀಡುತ್ತಿದ್ದ ಪತಿ ಮತ್ತು ಆತನ ಕುಟುಂಬದ ವಿರುದ್ಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೆಂಕಟೇಶ್ವರ ನಗರದ ನಿವಾಸಿ ವಿಜಯ್, ಆತನ ತಾಯಿ ನೇತ್ರಮ್ಮ ಹಾಗೂ ತಂದೆ ಹನುಮಂತಪ್ಪ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಕೌಟುಂಬಿಕ ದೌರ್ಜನ್ಯ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.
ಮದುವೆಯಾದ ಕೆಲವೇ ದಿನಗಳಲ್ಲಿ ಕಿರುಕುಳ:
ಕಳೆದ ವರ್ಷ ಮಹಿಳೆಯೊಂದಿಗೆ ವಿಜಯ್ ವಿವಾಹವಾಗಿದ್ದು, ಮದುವೆ ಸಂದರ್ಭದಲ್ಲಿ 10 ಲಕ್ಷ ರೂಪಾಯಿ ನಗದು ಹಾಗೂ ಸುಮಾರು 200 ಗ್ರಾಂ ಚಿನ್ನಾಭರಣಗಳನ್ನು ವರದಕ್ಷಿಣೆಯಾಗಿ ಪಡೆದಿದ್ದಾನೆ. ಆರಂಭದಲ್ಲಿ ಸುಸೂತ್ರವಾಗಿದ್ದ ದಾಂಪತ್ಯ ಜೀವನ ಬಳಿಕ ತವರು ಮನೆಯಿಂದ ಸೈಟು, ಜಮೀನು ಹಾಗೂ 20 ಲಕ್ಷ ರೂಪಾಯಿ ತರಬೇಕೆಂದು ಪತ್ನಿಯ ಮೇಲೆ ಒತ್ತಡ ಹೇರಲಾಗುತ್ತಿತ್ತು ಎನ್ನಲಾಗಿದೆ.

ವಿಜಯ್ ಪ್ರತಿದಿನ ಮದ್ಯಪಾನ ಮಾಡಿ ಮನೆಗೆ ಬಂದು ಪತ್ನಿ ಹಾಗೂ ಆಕೆಯ ಪೋಷಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ಇದಕ್ಕೆ ಆತನ ತಂದೆ-ತಾಯಿಯೂ ಸಾಥ್ ನೀಡಿ ಕಿರುಕುಳ ಹೆಚ್ಚಿಸುತ್ತಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ಈ ಹಿಂದೆ ಫೆಬ್ರವರಿಯಲ್ಲಿ ಕಿರುಕುಳ ತಾಳಲಾರದೆ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆ ವೇಳೆ ಇನ್ನು ಮುಂದೆ ತಪ್ಪು ಮಾಡುವುದಿಲ್ಲ ಎಂದು ವಿಜಯ್ ಪೊಲೀಸರ ಸಮ್ಮುಖದಲ್ಲಿ ಮುಚ್ಚಳಿಕೆ ಬರೆದುಕೊಟ್ಟಿದ್ದರೂ, ಬಳಿಕ ಮತ್ತೆ ಹಳೆಯ ಚಾಳಿ ಮುಂದುವರಿಸಿದ್ದಾನೆ ಎನ್ನಲಾಗಿದೆ.
ಆತ್ಮಹತ್ಯೆ ಯತ್ನ
ವರದಕ್ಷಿಣೆ ತರದಿದ್ದರೆ ಕೊಲೆ ಮಾಡಿ ಮತ್ತೊಂದು ಮದುವೆಯಾಗುವುದಾಗಿ ಬೆದರಿಕೆ ಹಾಕಿದ್ದರಿಂದ ಮನನೊಂದು ಮಹಿಳೆ ಮೇ 15ರಂದು ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಬಳಿಕ ಪೊಲೀಸರು ಹಾಗೂ ಕುಟುಂಬಸ್ಥರು ಮಗುವಿನ ಭವಿಷ್ಯ ಗಮನಿಸಿ ಸಂಧಾನ ಮಾಡಿ ಗಂಡನ ಮನೆಗೆ ಕಳುಹಿಸಿದ್ದರು. ಆದರೆ ಮೇ 22ರ ರಾತ್ರಿ ಮತ್ತೆ ಕುಡಿದು ಬಂದ ವಿಜಯ್, “ನನಗೆ ಸ್ಟೇಷನ್ನಲ್ಲಿ ಬುದ್ಧಿ ಹೇಳಿಸುತ್ತೀಯಾ” ಎಂದು ಆಕ್ರೋಶಗೊಂಡು ಪತ್ನಿಯ ಹೊಟ್ಟೆ, ಬೆನ್ನು ಹಾಗೂ ಮುಖಕ್ಕೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಷ್ಟೇ ಅಲ್ಲದೆ, ತಂಗಿಯನ್ನು ರಕ್ಷಿಸಲು ಬಂದ ಅಣ್ಣ ಮುರುಳಿ ಮೇಲೆಯೂ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಸದ್ಯ ಗಾಯಗೊಂಡಿರುವ ಮಹಿಳೆ ಹಾಗೂ ಆಕೆಯ ಅಣ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಮ್ಮ ಹಾಗೂ ಮಗುವಿನ ಜೀವಕ್ಕೆ ರಕ್ಷಣೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ದೂರು ಸ್ವೀಕರಿಸಿರುವ ಕಡೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.












