ತರೀಕೆರೆ: (ನ್ಯೂಸ್ ಮಲ್ನಾಡ್ ವರದಿ) ಯಾವುದೇ ಪರವಾನಗಿ ಹಾಗೂ ಸೂಕ್ತ ದಾಖಲೆಗಳಿಲ್ಲದೆ ಅಕ್ರಮವಾಗಿ ಜಾನುವಾರು ಸಾಗಣೆ ಮಾಡುತ್ತಿದ್ದ ವಾಹನದ ಮೇಲೆ ತರೀಕೆರೆ ಪೊಲೀಸರು ದಾಳಿ ನಡೆಸಿ, ಒಂದು ಹಸುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೀರೂರು ಕಡೆಯಿಂದ ಭದ್ರಾವತಿ ಕಡೆಗೆ ಬೊಲೆರೊ ಪಿಕಪ್ ವಾಹನದಲ್ಲಿ ಹಸುವನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ತರೀಕೆರೆ ಠಾಣೆಯ ಪಿಎಸ್ಐ ನಾಗೇಂದ್ರ ನಾಯ್ಕ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. KA 18 B 6462 ಸಂಖ್ಯೆಯ ಬೊಲೆರೊ ಪಿಕಪ್ ವಾಹನವನ್ನು ತಡೆದು ತಪಾಸಣೆ ನಡೆಸಿದ ವೇಳೆ, ಯಾವುದೇ ದಾಖಲೆ ಅಥವಾ ಪರವಾನಗಿ ಇಲ್ಲದೆ ಸಾಗಿಸಲಾಗುತ್ತಿದ್ದ ಒಂದು ಸಿಂದಿ ಜಾತಿಯ ಹಸುವನ್ನು ಪೊಲೀಸರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ವೇಳೆ ವಾಹನ ಚಾಲಕನಾದ ಎಂ.ಸಿ.ಹಳ್ಳಿಯ ಗೋಪಾಲ ಕಾಲೋನಿ ನಿವಾಸಿ ಶ್ರೀನಿವಾಸ (60) ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬೊಲೆರೊ ಪಿಕಪ್ ವಾಹನ ಹಾಗೂ ಹಸುವನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಆರೋಪಿ ಶ್ರೀನಿವಾಸ ವಿರುದ್ಧ ಸಂಬಂಧಿತ ಕಾಯ್ದೆಗಳಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.












