ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆ ಜನರಿಗೆ ಪುನರ್ವಸತಿ ಕಲ್ಪಿಸಲು 2025ರ ದರದ ಅನುಗುಣವಾಗಿ ಪರಿಹಾರ ನೀಡಬೇಕು ಎಂದು ಕುದುರೆಮುಖ ರಾಷ್ಟ್ರೀಯ ಉದ್ಯಾನ ಪುನರ್ವಸತಿ ಹೋರಾಟ ಸಮಿತಿಯ ಸದಸ್ಯರು ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾದ ಸುಧಾಕರ್ ಎಸ್ ಶೆಟ್ಟಿಯವರ ನೇತೃತ್ವದಲ್ಲಿ ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾದ ಹೆಚ್.ಡಿ ಕುಮಾರಸ್ವಾಮಿಯವರನ್ನು ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಬಸ್ ಗಳ ಸುರಕ್ಷತೆಗೆ ಮಹತ್ವದ ಕ್ರಮ; ಈ ನಿಯಮಗಳ ಪಾಲನೆ ಕಡ್ಡಾಯ!

ಈ ವೇಳೆ ಮಾತನಾಡಿದ ಸುಧಾಕರ್ ಶೆಟ್ಟಿ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಕಾರ್ಕಳ ವ್ಯಾಪ್ತಿಯ ಮೂಲ ನಿವಾಸಿಗಳಿಗೆ ಸರ್ಕಾರದಿಂದ ಪ್ರಕಟಿಸಿರುವ ಪುನರ್ವಸತಿ ಮತ್ತು ಪರಿಹಾರ ಸುತ್ತೋಲೆ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. 20 ವರ್ಷಗಳ ಹಳೆಯ ಎಸ್.ಆರ್ ದರದ ಮೇರೆಗೆ ನೀಡಲಾಗುತ್ತಿರುವ ಪರಿಹಾರದಿಂದ ಜನರು ಹೊಸ ಜೀವನ ಆರಂಭಿಸಲು ಅಸಾಧ್ಯವಾಗಿರುವುದನ್ನು ಅವರು ಹೇಳಿದರು.
ಹಣದುಬ್ಬರದಿಂದ ಭೂಮಿ, ಮನೆ, ಸರಕು ಸೇವೆಗಳ ಬೆಲೆಗಳು ಅನೇಕ ಪಟ್ಟು ಏರಿರುವ ಪರಿಸ್ಥಿತಿಯಲ್ಲಿ 2005ರ ದರದ ಆಧಾರದಲ್ಲಿ ಹಣ ನೀಡುವುದು ಅನ್ಯಾಯ ಎಂದು ಅವರು ಅಭಿಪ್ರಾಯಪಟ್ಟರು. ಸರ್ಕಾರದ ಪುನರ್ವಸತಿ ಯೋಜನೆ ಅಡಿ ನೀಡುವ ಮೊತ್ತದಿಂದ ಜನರು ಹೊಸ ಜಾಗ ಅಥವಾ ಮನೆ ಖರೀದಿಸಲು ಸಾಧ್ಯವಿಲ್ಲದ ಸ್ಥಿತಿ ಉಂಟಾಗಿದೆ. ಆದ್ದರಿಂದ 2005ರ ಪ್ಯಾಕೇಜ್ನ ಮೌಲ್ಯಗಳನ್ನು 2025ರ ಮಾರ್ಕೆಟ್ ದರಕ್ಕೆ ಹೋಲಿಸಿ ತಕ್ಷಣ ಪುನರ್ ಪರಿಶೀಲನೆ ನಡೆಸಿ ಹೊಸ ಆದೇಶ ನೀಡುವಂತೆ ಹೆಚ್.ಡಿ ಕುಮಾರಸ್ವಾಮಿ ಅವರಲ್ಲಿ ಮನವಿ ಸಲ್ಲಿಸಿದರು.
ಇದನ್ನೂ ಓದಿ: ರಾಜ್ಯದ ಪೊಲೀಸ್ ಸಿಬ್ಬಂದಿಗಳ ಸ್ಲೋಚ್ ಕ್ಯಾಪ್ ಗೆ ಗುಡ್ ಬೈ; ಪೊಲೀಸ್ ಪೇದೆಗಳಿಗೆ ಹೊಸ ಟೋಪಿ
ಕುದರೆಮುಖ ಪ್ರದೇಶದ ಜನರು ತಮ್ಮ ಮನೆಮನೆಗಳಿಂದ ಹೊರಬೀಳುವಂತೆ ಆಗಿರುವ ದುಸ್ಥಿತಿಯನ್ನು ಸುಧಾಕರ್ ಶೆಟ್ಟಿಯವರು ಸಚಿವರ ಗಮನಕ್ಕೆ ತಂದರು. ಮಾನವೀಯ ನೆಲೆಯಲ್ಲಿ ಸರ್ಕಾರವು ತಕ್ಷಣ ಸಹಾಯಕ ಕೈ ಚಾಚಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಹೆಚ್.ಡಿ ಕುಮಾರಸ್ವಾಮಿಯವರು ಪತ್ರದ ಮೂಲಕ ನೀಡಲಾದ ಬೇಡಿಕೆಗಳ ಕುರಿತು ಸಮಗ್ರ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು ಮತ್ತು ಸ್ಥಳೀಯ ಮಟ್ಟದಲ್ಲಿ ತೊಂದರೆ ಅನುಭವಿಸುತ್ತಿರುವ ಕುಟುಂಬಗಳಿಗೆ ನ್ಯಾಯ ದೊರಕುವಂತೆ ಸರ್ಕಾರದ ಗಮನಸೆಳೆಯುವುದಾಗಿ ಭರವಸೆ ನೀಡಿದರು.












