ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ಮುಳಬಾಗಿಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಜದಕಟ್ಟೆಯ ಅಡಿಕೆ ವ್ಯಾಪಾರಿ ಅಶ್ರಫ್ ಅವರ ಮನೆಯಲ್ಲಿ ನಡೆದ ಅಡಿಕೆ ಕಳ್ಳತನ ಪ್ರಕರಣವನ್ನು ತೀರ್ಥಹಳ್ಳಿ ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ ₹10.50 ಲಕ್ಷ ಮೌಲ್ಯದ ಕಳುವು ಮಾಲು ಮತ್ತು ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಜೂನ್ 4ರಂದು ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಮೆಹಬೂಬ್ ಸಾಬ್ ಬಿಜಾಪುರ್ ಹಾಗೂ ಕಾಸಿಂ ಸಾಬ್ ಬೇಪಾರಿ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ ಕಳವು ಮಾಡಲಾಗಿದ್ದ 9 ಕ್ವಿಂಟಾಲ್ ಅಡಿಕೆ ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ಸುಮಾರು ₹4.50 ಲಕ್ಷ ಎಂದು ಅಂದಾಜಿಸಲಾಗಿದೆ. ಅಲ್ಲದೆ ಕಳ್ಳತನಕ್ಕೆ ಬಳಸಲಾಗಿದ್ದ ಅಶೋಕ್ ಲೇಲ್ಯಾಂಡ್ ದೋಸ್ತ್ ವಾಹನವನ್ನು ಸಹ ವಶಕ್ಕೆ ಪಡೆಯಲಾಗಿದ್ದು, ಅದರ ಮೌಲ್ಯ ಸುಮಾರು ₹6 ಲಕ್ಷ ಎಂದು ತಿಳಿದುಬಂದಿದೆ. ಒಟ್ಟು ₹10.50 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರ್ಯಪ್ಪ ಹಾಗೂ ಡಿವೈಎಸ್‌ಪಿ ಅರವಿಂದ್ ಕಲಗುಜ್ಜಿಯವರ ಮಾರ್ಗದರ್ಶನದಲ್ಲಿ ತೀರ್ಥಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಇಮ್ರಾನ್ ಬೇಗ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಪಿಎಸ್‌ಐ ಸುಷ್ಮಾ, ಪಿಎಸ್‌ಐ ಯುವರಾಜ್, ಎಎಸ್‌ಐ ಮೀನಾಕ್ಷಿ, ಹೆಡ್ ಕಾನ್ಸ್‌ಟೇಬಲ್‌ಗಳಾದ ಲಿಂಗೇಗೌಡ ಮತ್ತು ಕುಮಾರ್, ಪೊಲೀಸ್ ಸಿಬ್ಬಂದಿಗಳಾದ ಮಂಜುನಾಥ್, ಹಂಪಿಹೂಳಿ, ಪ್ರದೀಪ್, ಪ್ರಮೋದ್, ವೀರೇಂದ್ರ, ದೀಪಕ್, ರಾಘವೇಂದ್ರ, ಶಿವಮೊಗ್ಗ ಡಿಪಿಒ ಗುರು ಹಾಗೂ ಇಂದ್ರೇಶ್ ಸೇರಿದಂತೆ ಹಲವು ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.















