ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ಆಗುಂಬೆ ಘಾಟಿಯಲ್ಲಿ ಭೂಕುಸಿತ ತಡೆಗಟ್ಟುವ ಉದ್ದೇಶದಿಂದ ರಸ್ತೆ ತಿರುವುಗಳ ದಂಡೆಗಳಲ್ಲಿ ಸುಮಾರು ಸಾವಿರ ಮೀಟರ್ ವ್ಯಾಪ್ತಿಗೆ ತಡೆಬೇಲಿ ನಿರ್ಮಿಸಲು ಸೂಚನೆ ನೀಡಲಾಗಿದೆ. ಅಲ್ಲದೆ ಘಾಟಿ ರಸ್ತೆ ದುರಸ್ತಿ ಕಾಮಗಾರಿಗೆ ₹15 ಕೋಟಿ ಅನುದಾನ ಮಂಜೂರಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಆಗುಂಬೆ ಘಾಟಿಯಲ್ಲಿ ವಾಹನಗಳ ದಟ್ಟಣೆ ಹೆಚ್ಚಳ, ಸಂಚಾರ ಸಮಸ್ಯೆ ಹಾಗೂ ಕೆಲವು ತಿರುವುಗಳ ದಂಡೆಗಳು ಕುಸಿದಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳೊಂದಿಗೆ ಘಾಟಿಗೆ ಭೇಟಿ ನೀಡಿದ ಅವರು ರಸ್ತೆ ತಿರುವುಗಳನ್ನು ಪರಿಶೀಲಿಸಿ ಮಾತನಾಡಿದರು.

ಇತ್ತೀಚೆಗೆ ಹುಲಿಕಲ್ ಘಾಟಿಯಲ್ಲಿ ಸಂಭವಿಸಿದ ದುರಂತದ ಹಿನ್ನೆಲೆಯಲ್ಲಿ ಅಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಇದರ ಪರಿಣಾಮವಾಗಿ ಆಗುಂಬೆ ಘಾಟಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ನಿರ್ಬಂಧವಿದ್ದರೂ ಜಲ್ಲಿಕಲ್ಲು ಸಾಗಿಸುವ ಲಾರಿಗಳು ಸೇರಿದಂತೆ ಭಾರಿ ತೂಕದ ವಾಹನಗಳ ಸಂಚಾರದಿಂದ ತಿರುವು ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಸಂಸದರ ಗಮನಕ್ಕೆ ತಂದರು.


ಇದಕ್ಕೆ ಪ್ರತಿಕ್ರಿಯಿಸಿದ ಕೋಟ ಶ್ರೀನಿವಾಸ ಪೂಜಾರಿ, ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನದಲ್ಲಿ ತುರ್ತಾಗಿ ತಿರುವುಗಳ ದಂಡೆಗಳಲ್ಲಿ ತಡೆಬೇಲಿ ನಿರ್ಮಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಮಳೆಗಾಲ ಮುಗಿದ ಬಳಿಕ ಕಾಮಗಾರಿ ಆರಂಭಿಸಲಾಗುವುದು ಎಂದರು.
ಆಗುಂಬೆ ಘಾಟಿಯ ಭೂಕುಸಿತ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರ ಪ್ರಸ್ತಾವನೆಯಂತೆ ಸುರಂಗ ಮಾರ್ಗ ನಿರ್ಮಾಣ ಹಾಗೂ ಈಗಿರುವ ರಸ್ತೆಯನ್ನು ದ್ವಿಪಥಗೊಳಿಸುವ ಕುರಿತು ಡಿಪಿಆರ್ ಸಿದ್ಧಪಡಿಸಲು ಟೆಂಡರ್ ಕರೆಯಲಾಗಿದೆ ಎಂದು ಅವರು ಹೇಳಿದರು.
ಸಾಧ್ಯತಾ ವರದಿಯನ್ನು ಆಧರಿಸಿ ಎರಡು ವಾರಗಳೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸುವಂತೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ವಿಭಾಗೀಯ ಅಧಿಕಾರಿ ಶ್ರೀಧರ್ ಅವರಿಗೆ ದೂರವಾಣಿ ಮೂಲಕ ಸೂಚನೆ ನೀಡಿರುವುದಾಗಿ ಸಂಸದರು ತಿಳಿಸಿದರು.
ಈ ಸಂದರ್ಭದಲ್ಲಿ ಆಗುಂಬೆ ವನ್ಯಜೀವಿ ವಲಯದ ಅಮಾಸೆಬೈಲು ವಲಯ ಅರಣ್ಯಾಧಿಕಾರಿ ರೂಪೇಶ್ ಚವ್ಹಾಣ, ಸೋಮೇಶ್ವರ ವನ್ಯಜೀವಿ ವಲಯದ ಹೆಬ್ರಿ ಅರಣ್ಯಾಧಿಕಾರಿ ಚಿದಾನಂದಪ್ಪ, ರಾಷ್ಟ್ರೀಯ ಹೆದ್ದಾರಿ ಇಲಾಖೆ ಕಾರ್ಯಪಾಲಕ ಅಭಿಯಂತರ ನವೀನ್ ಹಾಗೂ ಸಹಾಯಕ ಶಶಿಧರ್ ಜೋಯಿಸ್ ಉಪಸ್ಥಿತರಿದ್ದರು.
















