ಸಾಗರ: (ನ್ಯೂಸ್ ಮಲ್ನಾಡ್ ವರದಿ) ಕ್ರಿಕೆಟ್ ವಲಯದಲ್ಲಿ ಜನಪ್ರಿಯ ಆಟಗಾರರಾಗಿ ಗುರುತಿಸಿಕೊಂಡಿದ್ದ ಪ್ರವೀಣ್ ಹೆಗಡೆ ಬೂಸಾ (37) ಅವರು ವಿದ್ಯುತ್ ಆಘಾತದಿಂದ ಮೃತಪಟ್ಟ ಘಟನೆ ಜೂನ್ 7ರಂದು ಸಂಜೆ ನಡೆದಿದೆ.
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬಿದ್ರಕಾನ್ ಗ್ರಾಮದ ನಿವಾಸಿಯಾಗಿದ್ದ ಪ್ರವೀಣ್ ಹೆಗಡೆ ಅವರು ಪ್ರಸ್ತುತ ಸಾಗರ ತಾಲ್ಲೂಕಿನ ಕೆಳದಿ ಸಮೀಪದ ಹಾರೆಗೊಪ್ಪದಲ್ಲಿ ವಾಸವಾಗಿದ್ದರು.

ರವಿವಾರ ಸಂಜೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದ್ದ ಹಿನ್ನೆಲೆಯಲ್ಲಿ ಮನೆಯ ಸಮೀಪದ ವಿದ್ಯುತ್ ತಂತಿಗಳಿಗೆ ಅಡ್ಡಿಯಾಗಿದ್ದ ಮರದ ಕೊಂಬೆಗಳನ್ನು ಕತ್ತರಿಸಲು ಪ್ರವೀಣ್ ಮರ ಹತ್ತಿದ್ದರು. ಕೊಂಬೆ ಕತ್ತರಿಸುವ ಕಾರ್ಯದಲ್ಲಿ ತೊಡಗಿದ್ದ ವೇಳೆ ಏಕಾಏಕಿ ವಿದ್ಯುತ್ ಪ್ರವಹಿಸಿದ್ದು, ತೀವ್ರ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.
ವಿದ್ಯುತ್ ಶಾಕ್ನ ತೀವ್ರತೆಗೆ ಗಂಭೀರವಾಗಿ ಗಾಯಗೊಂಡ ಅವರನ್ನು ರಕ್ಷಿಸಲು ಸ್ಥಳೀಯರು ಹಾಗೂ ಕುಟುಂಬಸ್ಥರು ಧಾವಿಸಿದರೂ ಪ್ರಯೋಜನವಾಗದೆ ಅವರು ಮೃತಪಟ್ಟಿದ್ದಾರೆ.














