ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಆನೆಗುಂದ ಸಮೀಪದ ರಾಷ್ಟ್ರೀಯ ಹೆದ್ದಾರಿ ನೋಡಿದ್ರೆ ಇದು ಹೆದ್ದಾರಿಯೋ ಅಥವಾ ಖಾಸಗಿ ಖಾಲಿ ಸೈಟೋ ಅನ್ನೋ ಅನುಮಾನ ಬರ್ತಿದೆ.

ಹೌದು… ಒಂದು ಕಡೆ ಹೆದ್ದಾರಿಯ ಅಂಚಲ್ಲೇ ವಾಹನಗಳ ಪಾರ್ಕಿಂಗ್, ಇನ್ನೊಂದ್ ಕಡೆ ಕಲ್ಲು, ಜಲ್ಲಿ, ಇಟ್ಟಿಗೆ ಸೇರಿದಂತೆ ಕಟ್ಟಡ ಸಾಮಗ್ರಿಗಳ ರಾಶಿ. ಸಾರ್ವಜನಿಕರ ಸಂಚಾರಕ್ಕೆ ಮೀಸಲಾದ ರಾಷ್ಟ್ರೀಯ ಹೆದ್ದಾರಿಯನ್ನೇ ಕೆಲವರು ತಮ್ಮ ಖಾಸಗಿ ಜಾಗದಂತೆ ಬಳಸುತ್ತಿದಾರೆ.
ಇದರಿಂದ “ಹೆದ್ದಾರಿನಾ… ಅತ್ವ ಖಾಲಿ ಸೈಟಾ?” ಅನ್ನೋ ಪ್ರಶ್ನೆ ಈಗ ಶೃಂಗೇರಿ ಜನರ ಬಾಯಲ್ಲಿ ಕೇಳಿಬರುತ್ತಿದೆ.


ಸುಮಾರು ₹76 ಕೋಟಿ ವೆಚ್ಚದಲ್ಲಿ 5 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಆಗಿದ್ದು , ಐದು ವರ್ಷ ಕಳೆದರೂ ಕಾಮಗಾರಿ ಇನ್ನೂ ಸಂಪೂರ್ಣಗೊಂಡಿಲ್ಲ. ಇದರ ನಡುವೆ ಹೆದ್ದಾರಿಯ ಮೇಲೆಯೇ ಕಟ್ಟಡ ಸಾಮಗ್ರಿಗಳನ್ನು ರಾಶಿ ಹಾಕುವುದು, ವಾಹನಗಳನ್ನು ಅನಧಿಕೃತವಾಗಿ ನಿಲ್ಲಿಸುವುದು ನಿರಂತರವಾಗಿ ನಡೆಯುತ್ತಿದೆಯಾದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕಣ್ಣಿಗೆ ಬಟ್ಟೆ ಕಟ್ಟಿಕೊಂಡವರಂತೆ ಮೌನ ವಹಿಸಿದ್ದಾರೆ.


ರಾಷ್ಟ್ರೀಯ ಹೆದ್ದಾರಿ ಸಾರ್ವಜನಿಕರ ಸುರಕ್ಷಿತ ಸಂಚಾರಕ್ಕಾಗಿ ನಿರ್ಮಿಸಿರುವುದು ಹೊರತು, ಕಟ್ಟಡ ಸಾಮಗ್ರಿ ಸಂಗ್ರಹಿಸುವ ಜಾಗವಾಗಲಿ ಅಥವಾ ಖಾಸಗಿ ಪಾರ್ಕಿಂಗ್ ಸ್ಥಳವಾಗಲಿ ಅಲ್ಲ. ಆದರೂ ನಿಯಮ ಉಲ್ಲಂಘನೆಗಳು ಬಹಿರಂಗವಾಗಿ ನಡೆಯುತ್ತಿದ್ದರೂ ಇದುವರೆಗೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳದಿರುವುದು ಪ್ರಶ್ನೆ ಹುಟ್ಟಿಸಿದೆ.

ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ರಸ್ತೆ ಮೇಲಿರುವ ಕಲ್ಲು, ಜಲ್ಲಿ, ಇಟ್ಟಿಗೆ ಸೇರಿದಂತೆ ಎಲ್ಲ ಅತಿಕ್ರಮಣಗಳನ್ನು ತೆರವುಗೊಳಿಸಿ, ಹೆದ್ದಾರಿಯನ್ನು ಖಾಸಗಿ ಜಾಗದಂತೆ ಬಳಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕಾಟಾಚಾರದ ಹೈವೇ ಸುಖ ಅನುಭವಿಸುತ್ತಿರುವ ಶೃಂಗೇರಿ ಜನತೆಗೆ ಕನಿಷ್ಠ ಸುರಕ್ಷಿತ ಹೆದ್ದಾರಿಯನ್ನಾದರೂ ಒದಗಿಸಬೇಕಿದೆ.













