ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಣಕಲ್ ಸಮೀಪದ ದಾಸರಹಳ್ಳಿ ಗ್ರಾಮದಲ್ಲಿ ಕಳೆದ ಮೂರು ವರ್ಷಗಳಿಂದ ಕಲುಷಿತ ಕುಡಿಯುವ ನೀರು ಪೂರೈಕೆಯಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹಳ್ಳದ ನೀರು ನೇರವಾಗಿ ಬಾವಿಗೆ ಸೇರುತ್ತಿದ್ದು, ಯಾವುದೇ ಸಮರ್ಪಕ ಶುದ್ಧೀಕರಣವಿಲ್ಲದೆ ಅದೇ ನೀರನ್ನು ಗ್ರಾಮಸ್ಥರಿಗೆ ಪೂರೈಸಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಮತ್ತಿಕಟ್ಟೆ ಭಾಗದಿಂದ ಹರಿದು ಬರುವ ಹಳ್ಳದ ನೀರು ನೇರವಾಗಿ ಕುಡಿಯುವ ನೀರಿನ ಬಾವಿಗೆ ಸೇರುತ್ತಿದೆ. ಅಲ್ಲಿಂದ ನಲ್ಲಿಗಳ ಮೂಲಕ ಗ್ರಾಮಕ್ಕೆ ನೀರು ಸರಬರಾಜು ಮಾಡಲಾಗುತ್ತಿದ್ದು, ಇದರಿಂದ ಗ್ರಾಮಸ್ಥರು ಕಲುಷಿತ ನೀರನ್ನೇ ಬಳಸುವ ಅನಿವಾರ್ಯ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಕುಡಿಯುವ ನೀರಿನಲ್ಲಿ ಹುಳುಗಳು ತೇಲಿಬರುತ್ತಿದ್ದು, ಮಳೆಗಾಲದಲ್ಲಿ ತೋಟಗಳಿಗೆ ಸಿಂಪಡಿಸುವ ಕ್ರಿಮಿನಾಶಕ ಔಷಧಿಗಳೂ ನೀರಿನಲ್ಲಿ ಬೆರೆಯುತ್ತಿವೆ. ಇದರ ಪರಿಣಾಮ ಗ್ರಾಮದಲ್ಲಿ ಕಾಲರಾ, ಭೇದಿ, ಟೈಫಾಯಿಡ್ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಗ್ರಾಮಸ್ಥ ಪ್ರದೀಪ್ ಮಾತನಾಡಿ, “ಗ್ರಾಮ ಪಂಚಾಯಿತಿ ಕಚೇರಿ ಕೂಗಳತೆ ದೂರದಲ್ಲಿದ್ದರೂ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸಿಲ್ಲ. ಕಳೆದ ಮೂರು ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದೇವೆ. ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಶಾಸಕರ ಗಮನಕ್ಕೂ ತಂದಿದ್ದೇವೆ. ಆದರೂ ಇದುವರೆಗೆ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ” ಎಂದು ಆರೋಪಿಸಿದರು.
ಸಮಸ್ಯೆಗೆ ತಕ್ಷಣ ಪರಿಹಾರ ಕಲ್ಪಿಸದಿದ್ದರೆ ಖಾಲಿ ಕೊಡಗಳು ಹಾಗೂ ಕಲುಷಿತ ನೀರಿನೊಂದಿಗೆ ಗ್ರಾಮ ಪಂಚಾಯಿತಿ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು, ವಿಶೇಷವಾಗಿ ಮಹಿಳೆಯರು ಎಚ್ಚರಿಕೆ ನೀಡಿದ್ದಾರೆ.
ಒಂದೆಡೆ ಶುದ್ಧ ಕುಡಿಯುವ ನೀರಿನ ಯೋಜನೆಗಳಿಗೆ ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿರುವಾಗ, ದಾಸರಹಳ್ಳಿ ಗ್ರಾಮದಲ್ಲಿ ಮಾತ್ರ ಜನರು ಕಲುಷಿತ ನೀರು ಕುಡಿಯುವ ಪರಿಸ್ಥಿತಿ ಮುಂದುವರಿದಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವರದಿ: ತನು, ಕೊಟ್ಟಿಗೆಹಾರ












