ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ಕಟ್ಟೆಹಕ್ಕಲು ಭಾಗದಲ್ಲಿ ಕಳೆದ ಹತ್ತು ವರ್ಷಗಳಿಂದ ಮೆಸ್ಕಾಂ ಲೈನ್ಮ್ಯಾನ್ ಆಗಿ ಸೇವೆ ಸಲ್ಲಿಸುತ್ತಿದ್ದ ಹಿರಿಯ ನೌಕರರೊಬ್ಬರು ಹೃದಯಾಘಾತದಿಂದ ನಿಧನರಾದ ಘಟನೆ ನಡೆದಿದೆ. ಬಳ್ಳಾರಿ ಮೂಲದ ಹೊಸಗೇರಪ್ಪ (50) ಮೃತಪಟ್ಟವರು.
ಮೃತ ಹೊಸಗೇರಪ್ಪ ಅವರು ಮೂಲತಃ ಬಳ್ಳಾರಿ ಜಿಲ್ಲೆಯವರಾಗಿದ್ದು, ಕಳೆದ ಒಂದು ದಶಕದಿಂದ ತೀರ್ಥಹಳ್ಳಿ ತಾಲೂಕಿನ ಕಟ್ಟೆಹಕ್ಕಲು ವ್ಯಾಪ್ತಿಯಲ್ಲಿ ವಾಸವಿದ್ದು ಸಾರ್ವಜನಿಕರಿಗೆ ವಿದ್ಯುತ್ ಸೇವೆ ನೀಡುತ್ತಿದ್ದರು.

ಎಂದಿನಂತೆ ನಿನ್ನೆ ತಮ್ಮ ಕರ್ತವ್ಯ ಮುಗಿಸಿಕೊಂಡು ರಾತ್ರಿ ಮನೆಗೆ ಮರಳಿದ ಅವರು, ಊಟ ಮಾಡಿ ಮಲಗಿದ್ದರು. ಆದರೆ ಇಂದು ಬೆಳಿಗ್ಗೆಯಾದರೂ ಎದ್ದಿರದ ಹಿನ್ನೆಲೆಯಲ್ಲಿ ಆತಂಕಗೊಂಡ ಕುಟುಂಬಸ್ಥರು ಅವರನ್ನು ಎಬ್ಬಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಯಾವುದೇ ಪ್ರತಿಕ್ರಿಯೆ ನೀಡದಿದ್ದರಿಂದ ಅವರು ನಿದ್ರೆಯಲ್ಲೇ ಮೃತಪಟ್ಟಿರುವುದು ತಿಳಿದುಬಂದಿದೆ.
ರಾತ್ರಿ ಮಲಗಿದ್ದ ವೇಳೆ ತೀವ್ರ ಹೃದಯಾಘಾತ ಸಂಭವಿಸಿರುವುದು ಸಾವಿಗೆ ಕಾರಣ ಎಂದು ತಿಳಿದು ಬಂದಿದೆ.















