ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಬೈಕ್ ಸವಾರ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಡಿಕ್ಕಿ ಹೊಡೆದ ಘಟನೆ ನಗರದ ನರಿಗುಡ್ಡನಹಳ್ಳಿ ಸರ್ಕಲ್ ಬಳಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಭಾಗ್ಯಮ್ಮ ಎಂಬ ಮಹಿಳೆ ತಮ್ಮ ಮನೆಯಿಂದ ತರಕಾರಿ ತರಲೆಂದು ನರಿಗುಡ್ಡನಹಳ್ಳಿ ಸರ್ಕಲ್ ಕಡೆ ನಡೆದುಕೊಂಡು ಹೋಗುತ್ತಿದ್ದ ವೇಳೆ, ಅವರ ಹಿಂದಿನಿಂದ ಬಂದ KA 18 EN 9522 ನಂಬರಿನ ಎಫ್ಜಡ್ ಬೈಕ್ ಚಾಲಕ ಅಜಾಗರೂಕತೆಯಿಂದ ವಾಹನ ಚಲಾಯಿಸಿಕೊಂಡು ಬಂದು ಜೋರಾಗಿ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.

ಡಿಕ್ಕಿಯ ರಭಸಕ್ಕೆ ಭಾಗ್ಯಮ್ಮ ಅವರು ರಸ್ತೆಗೆ ಬಿದ್ದಿದ್ದು, ಅವರ ಸೊಂಟ, ಹಣೆ ಹಾಗೂ ಎಡಗೈಗೆ ತೀವ್ರ ಗಾಯಗಳಾಗಿವೆ. ಘಟನೆ ಸಂಭವಿಸಿದ ತಕ್ಷಣ ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಬೈಕ್ ಚಾಲಕ ಸೇರಿ ಗಾಯಾಳುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಚಿಕ್ಕಮಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಸ್ಪತ್ರೆಯಲ್ಲಿ ಎಕ್ಸ್-ರೇ ಹಾಗೂ ಸ್ಕ್ಯಾನಿಂಗ್ ಪರೀಕ್ಷೆ ನಡೆಸಿ ವೈದ್ಯರ ಸಲಹೆಯಂತೆ ಭಾಗ್ಯಮ್ಮ ಅವರು ದೀರ್ಘಕಾಲ ಚಿಕಿತ್ಸೆ ಪಡೆದಿದ್ದಾರೆ. ಗಾಯದ ನೋವಿನಿಂದ ಸ್ವಲ್ಪ ಗುಣಮುಖರಾದ ಬಳಿಕ ಮನೆಯವರೊಂದಿಗೆ ಸಮಾಲೋಚನೆ ನಡೆಸಿ, ಅವರು ತಡವಾಗಿ ಚಿಕ್ಕಮಗಳೂರು ಸಂಚಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಗಾಯಾಳು ಮಹಿಳೆಯ ದೂರಿನ ಮೇರೆಗೆ ಬೈಕ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.












