ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗೆ ವ್ಯಾಪಕವಾಗಿ ಹರಡುತ್ತಿರುವ ಹಳದಿ ಎಲೆಚುಕ್ಕಿ ಹಾಗೂ ಕೊಳೆರೋಗದಿಂದ ಸಾವಿರಾರು ರೈತರು ತೀವ್ರ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಈ ಸಮಸ್ಯೆಗಳಿಗೆ ಪರಿಹಾರ ನೀಡುವ ಉದ್ದೇಶದಿಂದ “ಬಯೋಶಮನ” ಎಂಬ ಜೈವಿಕ ಔಷಧಿಯನ್ನು ಅಭಿವೃದ್ಧಿಪಡಿಸಿರುವುದಾಗಿ ಹೈಟೆಕ್ ದೋಟಿ ಹಾಗೂ ಇನಾಮಿಕ್ ಟೆಕ್ನಾಲಜಿಯ ಸಿಇಒ ಬಾಲಸುಬ್ರಹ್ಮಣ್ಯ ಎಚ್.ಎಂ. ತಿಳಿಸಿದ್ದಾರೆ.
ಕಳೆದ ಆರು ವರ್ಷಗಳಿಂದ ವಿಜ್ಞಾನಿಗಳ ಸಹಯೋಗದೊಂದಿಗೆ ನಡೆಸಿದ ಸಂಶೋಧನೆಯ ಫಲವಾಗಿ ಈ ಔಷಧಿ ಸಿದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ಹಲವು ರೈತರ ತೋಟಗಳಲ್ಲಿ ನಡೆಸಿದ ಪ್ರಯೋಗದಲ್ಲಿ ಉತ್ತಮ ಪರಿಣಾಮ ಕಂಡುಬಂದಿದ್ದು, ರೋಗ ನಿಯಂತ್ರಣದಲ್ಲಿ ಯಶಸ್ಸು ದೊರೆತಿದೆ ಎಂದು ಅವರು ದಾವೆ ಮಾಡಿದ್ದಾರೆ.

ಈ ಉತ್ಪನ್ನವನ್ನು ಅಡಿಕೆ ಮಾತ್ರವಲ್ಲದೆ ಕಾಫಿ, ಕಾಳುಮೆಣಸು ಹಾಗೂ ಇತರ ತೋಟಗಾರಿಕಾ ಬೆಳೆಗಳಲ್ಲಿಯೂ ಬಳಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

















