ಕಳಸ: (ನ್ಯೂಸ್ ಮಲ್ನಾಡ್ ವರದಿ) ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಸುಮಾರು 30 ಅಡಿ ಆಳದ ತೋಟಕ್ಕೆ ಉರುಳಿ ಬಿದ್ದರೂ, ಕಾರಿನಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಬಾಳೆಖಾನ್ ಸಮೀಪ ನಡೆದಿದೆ.
ಕೊಟ್ಟಿಗೆಹಾರದಿಂದ ಧಾರ್ಮಿಕ ಕ್ಷೇತ್ರ ಹೊರನಾಡಿನತ್ತ ಪ್ರಯಾಣಿಸುತ್ತಿದ್ದ ಕಾರು, ಬಾಳೆಖಾನ್ ಬಳಿ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ತೋಟಕ್ಕೆ ನುಗ್ಗಿ ಪಲ್ಟಿಯಾಗಿದೆ. ಅಪಘಾತದ ತೀವ್ರತೆಗೆ ಕಾರು ಸುಮಾರು 30 ಅಡಿ ಆಳಕ್ಕೆ ಉರುಳಿಬಿದ್ದಿದೆ.

ಘಟನೆಯ ವೇಳೆ ಕಾರಿನಲ್ಲಿ ಒಂದು ವರ್ಷದ ಕಂದಮ್ಮ ಸೇರಿದಂತೆ ಹಲವರು ಪ್ರಯಾಣಿಸುತ್ತಿದ್ದರು.ಕಾರಿನಲ್ಲಿದ್ದ ಎಲ್ಲರೂ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳಿಗೆ ಸ್ಥಳೀಯರು ನೆರವು ನೀಡಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಈ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












