ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ಚಲಿಸುತ್ತಿದ್ದ ಬಸ್ನಲ್ಲಿಯೇ ಚಾಲಕನಿಗೆ ಮೆದುಳಿನ ರಕ್ತಸ್ರಾವ (Brain Hemorrhage) ಸಂಭವಿಸಿದರೂ ಸಮಯಪ್ರಜ್ಞೆಯಿಂದ ಬಸ್ಸನ್ನು ಸುರಕ್ಷಿತವಾದ ಸ್ಥಳಕ್ಕೆ ತಲುಪಿಸಿ ರಸ್ತೆ ಬದಿಗೆ ನಿಲ್ಲಿಸುವ ಮೂಲಕ 45ಕ್ಕೂ ಹೆಚ್ಚು ಪ್ರಯಾಣಿಕರ ಪ್ರಾಣ ಉಳಿಸಿದ ಘಟನೆ ನಡೆದಿದೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ಕೊಪ್ಪ ತಾಲೂಕಿನ ಅಗಳಗಂಡಿಯ ಬಸ್ ಚಾಲಕ ರಮೇಶ್ ಶೆಟ್ಟಿ ಅವರಿಗೆ ಚಾಲನೆಯ ವೇಳೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮುಡುಬಾ ಗ್ರಾಮದ ಬಳಿ ಅಸ್ವಸ್ಥತೆ ಉಂಟಾಗಿದೆ, ನೋವು ತೀವ್ರವಾಗುತ್ತಿದ್ದರೂ ನಿಯಂತ್ರಣ ಕಳೆದುಕೊಳ್ಳದೆ ಬಸ್ಸನ್ನು ಸುರಕ್ಷಿತವಾಗಿ ನಿಲ್ಲಿಸಿ ದೊಡ್ಡ ಅನಾಹುತ ತಪ್ಪಿಸಿದ್ದಾರೆ.
ಘಟನಾ ಸ್ಥಳದಲ್ಲಿದ್ದ ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಕುರುವಳ್ಳಿ ನಾಗರಾಜ್ ಹಾಗೂ ಬಸ್ ಚಾಲಕರುಗಳು, ಕಂಡಕ್ಟರ್, ಏಜೆಂಟರೆಲ್ಲರೂ ತಕ್ಷಣವೇ ಕಾರ್ಯಪ್ರವೃತ್ತರಾಗಿ ಚಾಲಕನ ಸ್ಥಿತಿಯನ್ನು ಗಮನಿಸಿ ಅಂಬುಲೆನ್ಸ್ ವ್ಯವಸ್ಥೆ ಮಾಡಿ ರಮೇಶ್ ಶೆಟ್ಟಿಯವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಚಿಕಿತ್ಸೆ ವೇಳೆ ಚಾಲಕರಿಗೆ, ಮೆದುಳಿನ ರಕ್ತಸ್ರಾವ (Brain Hemorrhage) ಸಂಭವಿಸಿದ್ದಾಗಿ ತಿಳಿದುಬಂದಿದ್ದು, ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಚಾಲಕನ ಸಮಯಪ್ರಜ್ಞೆಯಿಂದ ಬಸ್ನಲ್ಲಿದ್ದ ಸುಮಾರು 45 ಮಂದಿ ಪ್ರಯಾಣಿಕರು ಸುರಕ್ಷಿತರಾಗಿ ಪಾರಾಗಿದ್ದಾರೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.












