ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯಲ್ಲಿ ಆನ್ಲೈನ್ ಟ್ರೇಡಿಂಗ್ ಮೂಲಕ ದುಪ್ಪಟ್ಟು ಹಣ ಗಳಿಸಬಹುದು ಎಂದು ನಂಬಿಸಿ, ಅನಾಮಧೇಯ ವ್ಯಕ್ತಿಯೊಬ್ಬ ಮಹಿಳೆಯನ್ನು ಭಾರಿ ಮೊತ್ತಕ್ಕೆ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ವಾಟ್ಸಾಪ್ ಮೂಲಕ ಸಂಪರ್ಕಿಸಿದ ಅಪರಿಚಿತ ವ್ಯಕ್ತಿಯ ಮಾತುಗಳನ್ನು ನಂಬಿದ ಮಹಿಳೆ, ಲಾಭದ ಆಸೆಯಿಂದ ಒಟ್ಟು ₹2,59,95,000/- ರೂ.ಗಳನ್ನು ಕಳೆದುಕೊಂಡಿದ್ದಾರೆ. ವಂಚನೆಗೆ ಒಳಗಾದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ಸ್ಟಾಗ್ರಾಂ, ಟೆಲಿಗ್ರಾಮ್ ಹಾಗೂ ವಾಟ್ಸ್ಆಪ್ ಮೂಲಕ ತ್ವರಿತ ಲಾಭ, ಹೂಡಿಕೆ ಮಾಡಿದರೆ ದುಪ್ಪಟ್ಟು ಹಣ ಎಂಬ ಸುಳ್ಳು ಜಾಹೀರಾತುಗಳು ಹರಡಲಾಗುತ್ತಿದ್ದು, ಮೊದಲು ಸುಳ್ಳು ಟ್ರೇಡಿಂಗ್ ಆ್ಯಪ್ ಹಾಗೂ ವೆಬ್ಸೈಟ್ಗಳನ್ನು ತೋರಿಸಿ, ಸಣ್ಣ ಮೊತ್ತದಲ್ಲಿ ಲಾಭ ತೋರಿಸುವ ಮೂಲಕ ವಿಶ್ವಾಸ ಗಳಿಸುತ್ತಾರೆ. ನಂತರ ಹೆಚ್ಚಿನ ಹಣ ಹೂಡಿಕೆ ಮಾಡಲು ಪ್ರೇರೇಪಿಸಿ, ಹಣ ವರ್ಗಾಯಿಸಿದ ಬಳಿಕ ಆರೋಪಿಗಳು ಸಂಪರ್ಕ ಕಳೆದಕೊಳ್ಳುತ್ತಾರೆ. ಈ ರೀತಿಯ ಆನ್ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಸೈಬರ್ ಕ್ರೈಂ ಪೊಲೀಸರು ಮನವಿ ಮಾಡಿದ್ದಾರೆ.
ವಂಚನೆ ನಡೆದರೆ ತಕ್ಷಣ ಕೈಗೊಳ್ಳಬೇಕಾದ ಕ್ರಮಗಳು:
ಸೈಬರ್ ಕ್ರೈಂ ಪೋರ್ಟಲ್ನಲ್ಲಿ ದೂರು ಸಲ್ಲಿಸಿ: https://cybercrime.gov.in
ರಾಷ್ಟ್ರೀಯ ಸೈಬರ್ ಹೆಲ್ಪ್ಲೈನ್ ಸಂಖ್ಯೆ 1930 ಗೆ ಕರೆ ಮಾಡಿ.
ಹತ್ತಿರದ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿ.












