ಚಿಕ್ಕಮಗಳೂರು: ನಕಲಿ ಬೆಳ್ಳಿ ಗಟ್ಟಿ ನೀಡಿ ₹45 ಲಕ್ಷ ವಂಚನೆ: ದೂರು ದಾಖಲು

ಚಿಕ್ಕಮಗಳೂರು ನಗರದಲ್ಲಿ ಗ್ರಾಮಲೆಕ್ಕಿಗರೊಬ್ಬರಿಗೆ ಚಿನ್ನ ಹಾಗೂ ಬೆಳ್ಳಿ ಹೂಡಿಕೆಯಲ್ಲಿ ಹೆಚ್ಚಿನ ಲಾಭ ಮಾಡಿಕೊಡುವುದಾಗಿ ನಂಬಿಸಿ ₹45.23 ಲಕ್ಷ ಹಣ ಪಡೆದು ನಕಲಿ ಬೆಳ್ಳಿ ಗಟ್ಟಿಗಳನ್ನು ನೀಡಿ ವಂಚಿಸಿರುವ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯ ನಿವಾಸಿ ಹಾಗೂ ಚಿಕ್ಕಮಗಳೂರು ನಗರದ ಕಲ್ಯಾಣನಗರದ ವೈ.ಡಿ. ರಮೇಶ್ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಖಾಸಗಿ ಬ್ಯಾಂಕ್ ಉದ್ಯೋಗಿ ಶಿವಪ್ರಸಾದ್ ಮತ್ತು ಬಣಕಲ್‌ನ ಬ್ರಾಮರಿ ಜ್ಯುವೆಲ್ಲರ್ ವರ್ಕ್ಸ್‌ನ ನಾಗರಾಜ್ ವಿರುದ್ಧ ಆರೋಪ ಕೇಳಿಬಂದಿದೆ.

ಗ್ರಾಮ ಲೆಕ್ಕಿಗನಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ರಮೇಶ್ ಅವರಿಗೆ ಶಿವಪ್ರಸಾದ್ ಪರಿಚಯವಾಗಿದ್ದ. 2024ರಲ್ಲಿ ರಮೇಶ್ ಅವರ ಪತ್ನಿ ಪುಷ್ಪ ಅವರಿಗೆ ಸೇರಿದ ಕಡೂರು ಪಟ್ಟಣದ ಮನೆಯನ್ನು ಮಾರಾಟ ಮಾಡಿದ ಹಣವನ್ನು ಚಿನ್ನ ಮತ್ತು ಬೆಳ್ಳಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ಶಿವಪ್ರಸಾದ್ ಆಮಿಷವೊಡ್ಡಿದ್ದಾನೆ ಎನ್ನಲಾಗಿದೆ.

ಈ ವೇಳೆ ಬಣಕಲ್‌ನ ಬ್ರಾಮರಿ ಜ್ಯುವೆಲ್ಲರ್ ವರ್ಕ್ಸ್‌ನ ನಾಗರಾಜ್ ಎಂಬ ಅಕ್ಕಸಾಲಿಗನನ್ನು ಪರಿಚಯಿಸಿ, 50.830 ಕೆ.ಜಿ. ಬೆಳ್ಳಿಗೆ ₹45.23 ಲಕ್ಷಕ್ಕೆ ಮಾತುಕತೆ ನಡೆಸಿ ಬೆಳ್ಳಿ ಗಟ್ಟಿಗಳನ್ನು ನೀಡುವುದಾಗಿ ನಂಬಿಸಿದ್ದರು. ಅದರಂತೆ ಹಂತ ಹಂತವಾಗಿ ₹45.23 ಲಕ್ಷ ಹಣ ನೀಡಿ ರಮೇಶ್ ಅವರು ಬೆಳ್ಳಿ ಗಟ್ಟಿಗಳನ್ನು ಪಡೆದಿದ್ದರು. ಬಳಿಕ ಹಣದ ಅವಶ್ಯಕತೆ ಹಾಗೂ ಬೆಳ್ಳಿಯ ಬೆಲೆ ಏರಿಕೆಯಾಗಿದ್ದ ಹಿನ್ನೆಲೆಯಲ್ಲಿ 2025ರ ಮೇ ತಿಂಗಳಲ್ಲಿ 20 ಕೆ.ಜಿ. ಬೆಳ್ಳಿಯನ್ನು ಮಾರಾಟ ಮಾಡಲು ಮುಂದಾದಾಗ, ಅದರಲ್ಲಿ 16 ಕೆ.ಜಿ. ಬೆಳ್ಳಿ ನಕಲಿ ಎಂಬುದು ತಿಳಿದುಬಂದಿದೆ.

ಈ ಬಗ್ಗೆ ಶಿವಪ್ರಸಾದ್ ಮತ್ತು ನಾಗರಾಜ್ ಅವರನ್ನು ಪ್ರಶ್ನಿಸಿ ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದಾಗ, “ನಾವೇ ಆ ಬೆಳ್ಳಿಯನ್ನು ಮಾರಾಟ ಮಾಡಿ ನಿಮಗೆ ಹಣ ಕೊಡುತ್ತೇವೆ” ಎಂದು ಹೇಳಿ ಕಳೆದ ಏಪ್ರಿಲ್ 8ರಂದು ಎಲ್ಲ 50 ಕೆ.ಜಿ. ಬೆಳ್ಳಿಯನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ರಮೇಶ್ ದೂರಿನಲ್ಲಿ ತಿಳಿಸಿದ್ದಾರೆ.

ಆ ನಂತರ ಇಬ್ಬರೂ ಫೋನ್ ಕರೆ ಸ್ವೀಕರಿಸದೆ ನಾಪತ್ತೆಯಾಗಿದ್ದು, ತಮ್ಮನ್ನು ವಂಚಿಸಿರುವುದಾಗಿ ಆರೋಪಿಸಿ ರಮೇಶ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.