ಮೂಡಿಗೆರೆ: ಬೀಗ ಮುರಿದು ಮನೆ ಕಳ್ಳತನ: ನಗದು ಸೇರಿ ₹45 ಸಾವಿರ ಮೌಲ್ಯದ ವಸ್ತು ಕಳವು

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಬೀಗ ಹಾಕಿದ್ದ ಮನೆಯ ಮುಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು ನಗದು ಸೇರಿದಂತೆ ಅಪಾರ ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವ ಘಟನೆ ತಾಲ್ಲೂಕಿನ ಗೋಣಿಬೀಡು ಗ್ರಾಮದಲ್ಲಿ ನಡೆದಿದೆ.

ಗೋಣಿಬೀಡು ಗ್ರಾಮದ ಮಂಡಿಮನೆ ಲಕ್ಷ್ಮಣಗೌಡ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದ್ದು, ಮನೆಯವರು ಮೇ 30ರಂದು ಮಧ್ಯಾಹ್ನ ಸಕಲೇಶಪುರದಲ್ಲಿರುವ ತಮ್ಮ ಮಗಳ ಮನೆಗೆ ತೆರಳಿದ್ದರು. ಜೂನ್ 1ರಂದು ಬೆಳಿಗ್ಗೆ ಮನೆಗೆ ಮರಳಿದಾಗ ಮನೆಯ ಮುಂಬಾಗಿಲು ಮುರಿದಿರುವುದು ಹಾಗೂ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

ಕಳ್ಳರು ಮನೆಯೊಳಗೆ ಪ್ರವೇಶಿಸಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಧ್ವಂಸಗೊಳಿಸಿದ್ದಾರೆ. ಬಳಿಕ ಮನೆಯ ಕೊಠಡಿಯಲ್ಲಿ ಇರಿಸಲಾಗಿದ್ದ ₹10 ಸಾವಿರ ನಗದು, ₹25 ಸಾವಿರ ಮೌಲ್ಯದ ಎರಡು ಕೈಗಡಿಯಾರಗಳು ಹಾಗೂ ₹10 ಸಾವಿರ ಮೌಲ್ಯದ ಆಂಪ್ಲಿಫೈಯರ್‌ನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಒಟ್ಟಾರೆ ಸುಮಾರು ₹45 ಸಾವಿರ ಮೌಲ್ಯದ ಸ್ವತ್ತು ಕಳುವಾಗಿದೆ ಎಂದು ತಿಳಿದುಬಂದಿದೆ.

ಇದೇ ವೇಳೆ ಮನೆಯಲ್ಲಿದ್ದ ಎರಡು ಸ್ಪೀಕರ್‌ಗಳು ಹಾಗೂ ಜನರೇಟರ್‌ನ್ನು ಕಳ್ಳತನ ಮಾಡಲು ಯತ್ನಿಸಿದ ಕಳ್ಳರು, ಅವುಗಳನ್ನು ಮನೆಯ ಹೊರಗೆ ತಂದು ಬಿಟ್ಟು ತೆರಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಲಕ್ಷ್ಮಣಗೌಡ ಅವರು ಜೂನ್ 3ರಂದು ನೀಡಿದ ದೂರಿನ ಮೇರೆಗೆ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.