ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಪೌರತ್ವಕ್ಕೆ ಸಂಬಂಧಿಸಿದಂತೆ ಜನರಲ್ಲಿ ಗೊಂದಲ ಉಂಟಾಗಿದ್ದು, ಕೇಂದ್ರ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಶೃಂಗೇರಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ದುರ್ಗಾಚರಣ್ ಆಗ್ರಹಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, “ಪಾಸ್ಪೋರ್ಟ್, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ರೇಷನ್ ಕಾರ್ಡ್, ಗ್ಯಾಸ್ ಬಿಲ್, ವಿದ್ಯುತ್ ಬಿಲ್, ಚಾಲನಾ ಪರವಾನಗಿ ಸೇರಿದಂತೆ ಹಲವು ದಾಖಲೆಗಳನ್ನು ಇಷ್ಟು ದಿನ ಭಾರತೀಯ ಪೌರತ್ವದ ಗುರುತಾಗಿ ನಂಬಿಕೊಂಡಿದ್ದೇವೆ. ಆದರೆ ಈಗ ಇವು ಪೌರತ್ವದ ದಾಖಲೆಗಳಲ್ಲ ಎಂಬ ರೀತಿಯ ಚರ್ಚೆಗಳು ನಡೆಯುತ್ತಿರುವುದರಿಂದ ಜನರಲ್ಲಿ ಗೊಂದಲ ಸೃಷ್ಟಿಯಾಗಿದೆ. ಪೌರತ್ವ ಸಾಬೀತುಪಡಿಸಲು ಯಾವ ದಾಖಲೆಗಳು ಅಗತ್ಯ ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು” ಎಂದು ಒತ್ತಾಯಿಸಿದರು.

ದೇಶದ ನಾಗರಿಕರ ಬಗ್ಗೆ ಅನುಮಾನ ಮೂಡಿಸುವಂತಹ ವಾತಾವರಣ ನಿರ್ಮಾಣವಾಗಬಾರದು ಎಂದು ಹೇಳಿದ ಅವರು, “ದೇಶದ ಅಭಿವೃದ್ಧಿಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಿ. ಆದರೆ ಜನರಲ್ಲಿ ವಿಭಜನೆ ಉಂಟುಮಾಡುವ ನೀತಿಗಳನ್ನು ಅನುಸರಿಸಬಾರದು” ಎಂದು ಅಭಿಪ್ರಾಯಪಟ್ಟರು.
ಪ್ರಶ್ನೆ ಕೇಳುವವರನ್ನು ವಿವಿಧ ಹೆಸರುಗಳಿಂದ ಟೀಕಿಸುವ ಪ್ರವೃತ್ತಿ ಸರಿಯಲ್ಲ ಎಂದು ಆರೋಪಿಸಿದ ದುರ್ಗಾಚರಣ್, ದೇಶದ ಎಲ್ಲ ನಾಗರಿಕರಿಗೂ ಸಮಾನ ಗೌರವ ಮತ್ತು ಹಕ್ಕುಗಳು ದೊರೆಯಬೇಕು ಎಂದು ಆಗ್ರಹಿಸಿದರು.












