ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ವೈದ್ಯರ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯದ ಕಾರಣದಿಂದಾಗಿ 3 ತಿಂಗಳ ಹಸುಗೂಸೊಂದು ಮೃತಪಟ್ಟಿರುವ ದಾರುಣ ಘಟನೆ ಚಿಕ್ಕಮಗಳೂರು ನಗರದ ಸರ್ಕಾರಿ ಜಿಲ್ಲಾ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಶುಕ್ರವಾರ ನಡೆದಿದೆ.
ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದೆ ಮಗುವಿನ ಸಾವಿಗೆ ಸರ್ಕಾರಿ ಆಸ್ಪತ್ರೆ ಹಾಗೂ ಅಲ್ಲಿನ ವೈದ್ಯರ ಕಾರಣರಾಗಿದ್ದಾರೆ ಎಂದು ಆರೋಪಿಸಿ ಪೋಷಕರು ಹಾಗೂ ಸಂಬಂಧಿಕರು ಆಸ್ಪತ್ರೆಯ ಎದುರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏನಿದು ಘಟನೆ:
ಚಿಕ್ಕಮಗಳೂರು ನಗರದ ಅರವಿಂದ ನಗರದ ನಿವಾಸಿಗಳಾದ ರವೀಶ್- ತೇಜಸ್ವಿನಿ ದಂಪತಿಯ 3 ತಿಂಗಳ ಮಗು ಮೃತಪಟ್ಟ ದುರ್ದೈವಿ. ಗುರುವಾರ ಮಗುವಿಗೆ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆ ಪೋಷಕರು ನಗರದ ಸರ್ಕಾರಿ ಹೆರಿಗೆ ಆಸ್ಪತ್ರೆಗೆ ದಾಖಲಿಸಿದ್ದರು.
ಮಗುವನ್ನು ಪರೀಕ್ಷಿಸಿದ ವೈದ್ಯರು, ಮಗುವಿನ ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆ ಇದೆ ಎಂದು ಹೇಳಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದರು ಎನ್ನಲಾಗಿದೆ. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಶುಕ್ರವಾರ ಬೆಳಿಗ್ಗೆ ಮಗುವಿನ ಆರೋಗ್ಯ ಸ್ಥಿತಿ ಪರಿಶೀಲಿಸಿದ್ದ ವೈದ್ಯರು, ‘ಈಗ ಮಗು ಚೆನ್ನಾಗಿದೆ, ಯಾವುದೇ ತೊಂದರೆ ಇಲ್ಲ’ ಎಂದು ಪೋಷಕರಿಗೆ ತಿಳಿಸಿದ್ದರು. ವೈದ್ಯರ ಮಾತನ್ನು ನಂಬಿ ಪೋಷಕರು ನಿರಾಳವಾಗಿದ್ದರು.
ಆದರೆ, ಕೆಲವೇ ಗಂಟೆಗಳಲ್ಲಿ ಅಂದರೆ ಬೆಳಿಗ್ಗೆ 11 ಗಂಟೆ ಸುಮಾರಿಗೆ ಮಗುವಿನ ಸ್ಥಿತಿ ಹದಗೆಟ್ಟಾಗ ವೈದ್ಯರು ಹಠಾತ್ ಧಾವಿಸಿ, ‘ಇಲ್ಲಿ ಚಿಕಿತ್ಸೆ ನೀಡಲು ಆಗುವುದಿಲ್ಲ, ತಕ್ಷಣ ಹಾಸನಕ್ಕೆ ಕರೆದೊಯ್ದಿರಿ’ ಎಂದು ಕೈಚೆಲ್ಲಿದ್ದಾರೆ. ವೈದ್ಯರ ಸೂಚನೆಯಂತೆ ಪೋಷಕರು ಮಗುವನ್ನು ಹಾಸನಕ್ಕೆ ಕರೆದುಕೊಂಡು ಹೊರಟಿದ್ದರು. ಆದರೆ, ಮಾರ್ಗ ಮಧ್ಯೆ ಬೇಲೂರು ತಲುಪುವಷ್ಟರಲ್ಲಿ ಮಗು ತೀವ್ರವಾಗಿ ಸುಸ್ತಾಗಿ ಕೊನೆಯುಸಿರೆಳೆದಿದೆ ಎನ್ನಲಾಗಿದೆ.
ಆಸ್ಪತ್ರೆ ಬಳಿ ಪೋಷಕರ ಆಕ್ರಂದನ:
ಮಗುವಿನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಘಾತಕ್ಕೊಳಗಾದ ಕುಟುಂಬಸ್ಥರು ಮೃತದೇಹದೊಂದಿಗೆ ಚಿಕ್ಕಮಗಳೂರಿನ ಸರ್ಕಾರಿ ಹೆರಿಗೆ ಆಸ್ಪತ್ರೆಗೆ ಮರಳಿ ಆಸ್ಪತ್ರೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಬೆಳಿಗ್ಗೆ ಮಗು ಚೆನ್ನಾಗಿದೆ ಎಂದು ಹೇಳಿ, ಕೊನೆ ಘಳಿಗೆಯಲ್ಲಿ ಕೈಚೆಲ್ಲಿದ ವೈದ್ಯರ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ನೇರ ಕಾರಣ ಎಂದು ಪೋಷಕರು ಕಣ್ಣೀರಿಡುತ್ತಾ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ನಿರ್ಲಕ್ಷ್ಯ ವಹಿಸಿದ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.












