ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಾಫಿನಾಡಿನಲ್ಲಿ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗುವ ಬೆಳವಣಿಗೆಯೊಂದು ನಡೆದಿದ್ದು, ಜಿಲ್ಲೆಯ ಹಿಂದೂ ಮುಖಂಡರು ಹಾಗೂ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಪದಾಧಿಕಾರಿಗಳ ವಿರುದ್ಧ ಜಿಲ್ಲಾ ಪೊಲೀಸ್ ಇಲಾಖೆ ಗಡಿಪಾರು ಕ್ರಮ ಕೈಗೊಳ್ಳಲು ಮುಂದಾಗಿದೆ.
ಇದನ್ನೂ ಓದಿ: ಈ ಕುಟುಂಬಗಳಿಗೆ ಎಲ್ಪಿಜಿ ಗ್ಯಾಸ್ ಸಿಗಲ್ಲ; ಸರ್ಕಾರದ ಹೊಸ ನಿಯಮ

ಹೌದು, ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಇಲಾಖೆ ಆರು ಜನರನ್ನು ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಸಹಾಯಕ ಆಯುಕ್ತರಿಗೆ (AC) ಶಿಫಾರಸ್ಸು ಪತ್ರ ಕಳುಹಿಸಿದೆ. ಈ ಪಟ್ಟಿಯಲ್ಲಿ ಪ್ರಮುಖವಾಗಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ಹಾಗೂ ಭಜರಂಗದಳದ ಹಾಸನ ವಿಭಾಗದ ಸಂಯೋಜಕ ಶ್ಯಾಮ್ ವಿ ಗೌಡ ಸೇರಿದ್ದಾರೆ. ಇವರೊಂದಿಗೆ ವಿವಿಧ ಕೋಮು ಸಂಘರ್ಷ ಪ್ರಕರಣಗಳು ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದ ಆರೋಪ ಎದುರಿಸುತ್ತಿರುವ ನಾಲ್ವರು ಮುಸ್ಲಿಂ ಮುಖಂಡರಾದ ಜೋಹರ್, ಚಾಂದ್, ಇಬ್ರಾಹಿಂ ಮತ್ತು ಇಮ್ರಾನ್ ಅವರ ಹೆಸರನ್ನೂ ಶಿಫಾರಸ್ಸಿನಲ್ಲಿ ಸೇರಿಸಲಾಗಿದೆ.
ಪೊಲೀಸ್ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ಸಂತೋಷ್ ಕೋಟ್ಯಾನ್ ವಿರುದ್ಧ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 14 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆ ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಅವರನ್ನು ಜಿಲ್ಲೆಯಿಂದ ಹೊರಹಾಕುವಂತೆ ಶಿಫಾರಸ್ಸು ಮಾಡಲಾಗಿದೆ.
ಇದನ್ನೂ ಓದಿ: LPG ಗ್ರಾಹಕರಿಗೆ ಮಹತ್ವದ ಸೂಚನೆ; ಆಧಾರ್ ಇ ಕೆವೈಸಿ ಮಾಡದಿದ್ರೆ ಸಿಗಲ್ಲ ಸಿಲಿಂಡರ್ !
ಯುಗಾದಿ ಹಬ್ಬದ ಸಂಭ್ರಮದ ವೇಳೆಯಲ್ಲೇ ಈ ನೋಟಿಸ್ ಜಾರಿಯಾಗಿರುವುದು ರಾಜಕೀಯ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಹಿಂದೂ ಸಂಘಟನೆಗಳು ಮತ್ತು ಬಿಜೆಪಿ ಕಾರ್ಯಕರ್ತರು ಈ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಹಬ್ಬದ ಸಮಯದಲ್ಲೇ ಮುಖಂಡರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಸಹಾಯಕ ಆಯುಕ್ತರು ಪೊಲೀಸ್ ಇಲಾಖೆಯ ಶಿಫಾರಸ್ಸನ್ನು ಸ್ವೀಕರಿಸಿದ್ದು, ಸಂಬಂಧಪಟ್ಟ ಆರು ಜನರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಲಿದ್ದಾರೆ. ವಿಚಾರಣೆ ವೇಳೆ ಆರೋಪಿಗಳಿಗೆ ಅಥವಾ ಅವರ ಪರ ವಕೀಲರಿಗೆ ತಮ್ಮ ವಾದ ಮಂಡಿಸಲು ಅವಕಾಶ ಕಲ್ಪಿಸಲಾಗುತ್ತದೆ.
ಈ ಬೆಳವಣಿಗೆ ಜಿಲ್ಲೆಯಲ್ಲಿ ರಾಜಕೀಯ ಚರ್ಚೆಗಳಿಗೆ ಕಾರಣವಾಗಿದ್ದು, ವಿವಿಧ ಸಮುದಾಯಗಳು ಹಾಗೂ ರಾಜಕೀಯ ಪಕ್ಷಗಳ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.












