ಪತಿಯ ಮೃತದೇಹದ ಜೊತೆ 10 ದಿನ ಬದುಕಿದ ಪತ್ನಿ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೃದಯ ಕಲುಕುವ ಘಟನೆ ಬೆಳಕಿಗೆ ಬಂದಿದೆ.

77 ವರ್ಷದ ಸಿರಿಲ್ ಮೋನಿಸ್ ಅವರು ಅನಾರೋಗ್ಯದಿಂದ ಮನೆಯಲ್ಲಿ ಮಲಗಿದ್ದಲ್ಲೇ ಸಾವನ್ನಪ್ಪಿದ್ದು, ಅವರ ಪತ್ನಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಕಾರಣ ಪತಿ ಮೃತಪಟ್ಟಿರುವುದೇ ಗೊತ್ತಾಗದೆ ಸುಮಾರು 10 ದಿನಗಳ ಕಾಲ ಮೃತದೇಹದ ಜೊತೆ ಬದುಕಿದ್ದಾಳೆ. “ನನ್ನ ಗಂಡ ನನಗೆ ಬೇಕು” ಎಂದು ಹೇಳುತ್ತ ಪೊಲೀಸರಿಗೆ ಸಹ ಮೃತದೇಹವನ್ನು ಮುಟ್ಟಲು ಅವಕಾಶ ನೀಡದ ಸ್ಥಿತಿ ನಿರ್ಮಾಣವಾಗಿತ್ತು.

ಮೃತರ ಮಗ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಮಗಳು ದುಬೈನಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ತಂದೆ ಸಾವನ್ನಪ್ಪಿದರೂ ಮಗಳು ಬಾರದೆ ಉಳಿದಿದ್ದು, ಊರಿಗೆ ತಡವಾಗಿ ಬಂದ ಮಗನಿಗೂ ತಂದೆಯ ಮುಖವನ್ನು ಕೊನೆಯ ಬಾರಿ ನೋಡುವ ಅವಕಾಶ ಸಿಗಲಿಲ್ಲ. ಮಗ ದಿನವೂ ತಾಯಿಗೆ ಕರೆ ಮಾಡುತ್ತಿದ್ದರೂ, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ತಾಯಿ “ಅಪ್ಪ ಚೆನ್ನಾಗಿದ್ದಾರೆ” ಎಂದೇ ಹೇಳುತ್ತಿದ್ದಳು. ಸುಮಾರು 15 ದಿನಗಳ ಹಿಂದೆ ಮನೆಗೆ ಬಂದಿದ್ದ ಮಗ ನಾಲ್ಕು ದಿನಗಳ ಕಾಲ ತಂದೆಯನ್ನು ನೋಡಿಕೊಂಡು ಹಿಂತಿರುಗಿದ್ದನು. ನಂತರ ಈ ದುರ್ಘಟನೆ ನಡೆದಿದೆ.

ಮೋನಿಸ್ ಅವರ ಮೃತದೇಹ ಕೊಳೆತು ದುರ್ವಾಸನೆ ಹರಡಿದ ನಂತರ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರು ಮೃತದೇಹವನ್ನು ಮುಟ್ಟಲು ಸಹ ಮುಂದಾಗದ ಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಸಮಾಜ ಸೇವಕ ಆರೀಫ್ ಅವರು ಮುಂದೆ ಬಂದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದರು. ನಂತರ ಬಣಕಲ್ ಕ್ರೈಸ್ತ ಸ್ಮಶಾನದಲ್ಲಿ ಸಂಜೆ ವೇಳೆಗೆ ಸಿರಿಲ್ ಮೋನಿಸ್ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಈ ಘಟನೆ ಮಾನವೀಯತೆ ಮತ್ತು ಕುಟುಂಬ ಸಂಬಂಧಗಳ ಬಗ್ಗೆ ಅನೇಕ ಪ್ರಶ್ನೆಗಳನ್ನು ಎಬ್ಬಿಸುವಂತಿದ್ದು, ಇಬ್ಬರು ಮಕ್ಕಳಿಗೂ ಅತ್ಯಂತ ದುರಾದೃಷ್ಟಕರ ಪರಿಸ್ಥಿತಿ ಉಂಟಾಗಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.