ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯೆಟ್), ಚಿಕ್ಕಮಗಳೂರು ವತಿಯಿಂದ ಪದವಿಪೂರ್ವ ಶಿಕ್ಷಣ ಇಲಾಖೆಯ ವಿಜ್ಞಾನ (ಗಣಿತ ಹಾಗೂ ಜೀವಶಾಸ್ತ್ರ) ವಿಷಯ ಬೋಧಿಸುವ ಉಪನ್ಯಾಸಕರಿಗಾಗಿ ಜುಲೈ 10 ಮತ್ತು 11ರಂದು ಎರಡು ದಿನಗಳ ತರಬೇತಿ ಕಾರ್ಯಕ್ರಮವನ್ನು ಡಯೆಟ್ ಸಭಾಂಗಣದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕ (ಅಭಿವೃದ್ಧಿ) ಸುಂದರೇಶ್ ಉದ್ಘಾಟಿಸಿ ಮಾತನಾಡಿ, ವಿಜ್ಞಾನ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಉಪನ್ಯಾಸಕರ ನಿರಂತರ ತರಬೇತಿ ಅತ್ಯಗತ್ಯ ಎಂದು ತಿಳಿಸಿದರು. ಸಿಇಟಿ-ಕೇಂದ್ರಿತ ಬೋಧನಾ ವಿಧಾನಗಳೊಂದಿಗೆ ನವೀನ ತಂತ್ರಜ್ಞಾನ, ಪ್ರಯೋಗಾತ್ಮಕ ಚಟುವಟಿಕೆಗಳು ಹಾಗೂ ವಿದ್ಯಾರ್ಥಿ ಕೇಂದ್ರಿತ ಕಲಿಕಾ ವಿಧಾನಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು. ಶಿಕ್ಷಕ ವೃತ್ತಿ ಪವಿತ್ರವಾದ ಹುದ್ದೆಯಾಗಿದ್ದು, ಸಮಾಜ ಮತ್ತು ರಾಷ್ಟ್ರದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಾಗರಾಜ್ ರಾವ್ ಮಾತನಾಡಿ, ವಿಜ್ಞಾನ ಬೋಧನೆಯಲ್ಲಿ ಹೊಸ ಕಲಿಕಾ ವಿಧಾನಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ವಿಶ್ಲೇಷಣಾತ್ಮಕ ಚಿಂತನೆ ಹಾಗೂ ಸಮಸ್ಯೆ ಪರಿಹಾರ ಕೌಶಲ್ಯಗಳನ್ನು ಬೆಳೆಸುವ ಜವಾಬ್ದಾರಿ ಉಪನ್ಯಾಸಕರ ಮೇಲಿದೆ ಎಂದು ಹೇಳಿದರು.
ಡಯೆಟ್ನ ಹಿರಿಯ ಉಪನ್ಯಾಸಕರು ಹಾಗೂ ನೋಡಲ್ ಅಧಿಕಾರಿಯಾದ ಸಂತೋಷ್ ಜಿ ಮಾತನಾಡಿ, ಶಿಕ್ಷಕರು ನಿರಂತರ ಜ್ಞಾನ ವಿಸ್ತರಣೆಯೊಂದಿಗೆ ತರಬೇತಿಗಳ ಮೂಲಕ ತಮ್ಮ ಬೋಧನಾ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯ ವಿವಿಧ ಪದವಿಪೂರ್ವ ಕಾಲೇಜುಗಳ ಗಣಿತ ಹಾಗೂ ಜೀವಶಾಸ್ತ್ರ ವಿಭಾಗದ ಉಪನ್ಯಾಸಕರು ತರಬೇತಿಯಲ್ಲಿ ಭಾಗವಹಿಸಿ ವಿಷಯ ಪರಿಣಿತರಿಂದ ಮಾರ್ಗದರ್ಶನ ಪಡೆದರು.
ಕಾರ್ಯಕ್ರಮದಲ್ಲಿ ನಾಗರಾಜ್ ಪ್ರಾರ್ಥನೆ ನೆರವೇರಿಸಿದರು. ಮಂಜುನಾಥ್ ಸ್ವಾಗತಿಸಿದರು. ಆನಂದ್ ವಂದಿಸಿದರು. ನೋಡಲ್ ಅಧಿಕಾರಿಯಾದ ಸಂತೋಷ್ ಜಿ ಕಾರ್ಯಕ್ರಮ ನಿರೂಪಿಸಿ ತರಬೇತಿಯ ಉದ್ದೇಶ ಹಾಗೂ ಮಹತ್ವವನ್ನು ವಿವರಿಸಿದರು.












