
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ಕೊಟ್ಟಿಗೆಹಾರ ಸಮೀಪದ ದೇವನಗುಲ್ ಎಂಬಲ್ಲಿ ಸಿಮೆಂಟ್ ಶೀಟ್ ತುಂಬಿದ್ದ ಟ್ರ್ಯಾಕ್ಟರ್ ಹೆದ್ದಾರಿಯಲ್ಲೇ ಪಲ್ಟಿಯಾದ ಘಟನೆ ಮಂಗಳವಾರ ನಡೆದಿದೆ.
ಅಪಘಾತದ ತೀವ್ರತೆಗೆ ರಸ್ತೆಯಲ್ಲೇ ಟ್ರ್ಯಾಕ್ಟರ್ ಉರುಳಿ ಬಿದ್ದಿದ್ದರೂ, ಚಾಲಕ ಯಾವುದೇ ಪ್ರಾಣಾಪಾಯವಿಲ್ಲದೆ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ.
ಕಳಸದಿಂದ ಮೂಡಿಗೆರೆ ಕಡೆಗೆ ಸಿಮೆಂಟ್ ಶೀಟ್‌ಗಳನ್ನು ಹೇರಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್, ದೇವನಗುಲ್ ಸಮೀಪದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ ಟ್ರ್ಯಾಕ್ಟರ್ ರಸ್ತೆಯ ಮಧ್ಯಭಾಗದಲ್ಲೇ ಪಲ್ಟಿಯಾಗಿದ್ದು, ಅದರಲ್ಲಿದ್ದ ಸಿಮೆಂಟ್ ಶೀಟ್‌ಗಳು ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಇದರಿಂದಾಗಿ ಕೊಟ್ಟಿಗೆಹಾರದಿಂದ ಹೊರನಾಡು ಮತ್ತು ಶೃಂಗೇರಿ ಕಡೆಗೆ ಸಾಗುವ ಪ್ರಮುಖ ಸಂಪರ್ಕ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.

ಹೆದ್ದಾರಿಯ ಮಧ್ಯದಲ್ಲೇ ಟ್ರ್ಯಾಕ್ಟರ್ ಬಿದ್ದಿದ್ದರಿಂದ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು.














