
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಆಟವಾಡುತ್ತಿದ್ದ ಬಾಲಕಿಯೊಬ್ಬಳು ಜೋಕಾಲಿ ಆಡಲು ಹೋಗಿ ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ಚಿಕ್ಕಮಗಳೂರು ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ.
ಮನೆಯಲ್ಲಿ ಕಟ್ಟಿದ್ದ ಸೀರೆ ಜೋಕಾಲಿ ಬಾಲಕಿಯ ಪಾಲಿಗೆ ಮೃತ್ಯುಪಾಶವಾಗಿ ಪರಿಣಮಿಸಿದ್ದು, ಗ್ರಾಮದಲ್ಲಿ ಶೋಕ ಸಾಗರವೇ ನೆರೆದಿದೆ.
ಹೆಬ್ಬಳ್ಳಿ ಗ್ರಾಮದ ನಿವಾಸಿ ಲೇಖನಾ (10) ಮೃತಪಟ್ಟ ದುರ್ದೈವಿ. ಘಟನೆ ನಡೆದ ಸಮಯದಲ್ಲಿ ಬಾಲಕಿಯ ಪೋಷಕರು ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಮನೆಯವರು ಹೊರಗೆ ಹೋಗಿದ್ದಾಗ ಒಂಟಿಯಾಗಿದ್ದ ಲೇಖನಾ, ಮನೆಯಲ್ಲಿ ಹಾಕಿದ್ದ ಸೀರೆ ಜೋಕಾಲಿಯಲ್ಲಿ ಆಟವಾಡಲು ಮುಂದಾಗಿದ್ದಾಳೆ. ಈ ವೇಳೆ ಆಕಸ್ಮಿಕವಾಗಿ ಸೀರೆ ಆಕೆಯ ಕೊರಳಿಗೆ ಬಿಗಿದುಕೊಂಡಿದೆ. ಗಾಬರಿಗೊಂಡ ಬಾಲಕಿ ಸೀರೆಯನ್ನು ಬಿಡಿಸಿಕೊಳ್ಳಲು ಪ್ರಯತ್ನಿಸಿದರೂ ಸಾಧ್ಯವಾಗದೆ, ಕತ್ತು ಸಿಲುಕಿ ಸ್ಥಳದಲ್ಲೇ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ.

ಪೋಷಕರು ಮನೆಗೆ ಮರಳಿದಾಗ ಬಾಲಕಿ ಶವವಾಗಿ ಪತ್ತೆಯಾಗಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿದೆ. ವಿಷಯ ತಿಳಿಯುತ್ತಿದ್ದಂತೆಯೇ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.















