ಅಜ್ಜಂಪುರ: (ನ್ಯೂಸ್ ಮಲ್ನಾಡ್ ವರದಿ) ರಸ್ತೆಯ ಸಿದ್ದಾಪುರ ತಿರುವಿನಲ್ಲಿ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಟ್ರ್ಯಾಕ್ಟರ್ ಚಾಲಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಸಿದ್ದಾಪುರ ಗ್ರಾಮದ ಪ್ರಭಾಕರ್ ಎಂದು ಗುರುತಿಸಲಾಗಿದೆ.
ಚಿಕ್ಕಾನವಂಗಲ ಕೆರೆಯಿಂದ ಟ್ರ್ಯಾಕ್ಟರ್‌ನಲ್ಲಿ ಮಣ್ಣು ತುಂಬಿಸಿಕೊಂಡು ಸಾಗುತ್ತಿದ್ದ ವೇಳೆ, ಅಜ್ಜಂಪುರ ಕಡೆಯಿಂದ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಬಂದ ಲಾರಿಯೊಂದು ಟ್ರ್ಯಾಕ್ಟರ್‌ನ ಮಧ್ಯಭಾಗಕ್ಕೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಟ್ರ್ಯಾಕ್ಟರ್ ಚಾಲಕ ಪ್ರಭಾಕರ್ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಘಟನೆಯಲ್ಲಿ ಲಾರಿಯಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.














