ಆಲೂರು: (ನ್ಯೂಸ್ ಮಲ್ನಾಡ್ ವರದಿ) ಪಾಳ್ಯ ಹೋಬಳಿ ಕಣದಹಳ್ಳಿ ಗ್ರಾಮದಲ್ಲಿ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಸ್. ಮಂಜೇಗೌಡರ ಪಿತ್ರಾರ್ಜಿತ ಮೂರು ಮನೆಗಳಿಗೆ, ಬುಧವಾರ ಆಕಸ್ಮಿಕ ಬೆಂಕಿ ತಗುಲಿ ₹ 50 ಲಕ್ಷ ಮೌಲ್ಯದ ವಸ್ತುಗಳು ನಾಶವಾಗಿವೆ.
ಕೆ. ಎಸ್. ಮಂಜೇಗೌಡರ ಸೋದರ ಸಂಬಂಧಿಗಳಾದ ಹೇಮಾವತಿ ರಾಜೇಗೌಡ, ಶಾಂತಮ್ಮ ಮತ್ತು ಇವರ ದೊಡ್ಡಪ್ಪ ಸಣ್ಣಪ್ಪಗೌಡ ಅವರ ಮನೆಗಳು ಹೊಂದಿಕೊಂಡಿದ್ದವು. ಮಧ್ಯಾಹ್ನ ಬೆಂಕಿ ತಗುಲಿರುವುದು ಗೊತ್ತಾದ ತಕ್ಷಣ ಅಗ್ನಿಶಾಮಕ ದಳದವರು ಬಂದು ಬೆಂಕಿ ಆರಿಸಿದರು. ಅಷ್ಟರಲ್ಲಿ ಮನೆಯಲ್ಲಿದ್ದ ಬಟ್ಟೆ, ಚಿನ್ನ, ಭತ್ತ, ದಿನಬಳಕೆ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದವು. ಸ್ಥಳಕ್ಕೆ ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿದರು.

ಮೂರು ಮನೆಯಲ್ಲಿದ್ದ ಕೆಲವರು ಮದುವೆ ಕಾರ್ಯಕ್ಕೆ, ಕೆಲವರು ಕೃಷಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಬೆಂಕಿ ತಗುಲಿದ್ದು ಕಾರಣ ತಿಳಿದುಬಂದಿಲ್ಲ.
ಹೇಮಾವತಿ ರಾಜೇಗೌಡರ ಮನೆಯಲ್ಲಿ ₹1.70 ಲಕ್ಷ ನಗದು, 100 ಗ್ರಾಂ ಚಿನ್ನ, 20 ಕ್ವಿಂಟಲ್ ಭತ್ತ, ಶಾಂತಮ್ಮ ಅವರ ಮನೆಯಲ್ಲಿ 20 ಚೀಲ ಭತ್ತ, ₹70 ಸಾವಿರ ನಗದು, ಚಿನ್ನ ಮತ್ತು ಸಣ್ಣಪ್ಪಗೌಡರ ಮನೆಯಲ್ಲಿಯೂ ಭತ್ತ, ಚಿನ್ನ, ನಗದು ಸುಟ್ಟು ಕರಕಲಾಗಿದೆ.

ಬಿದಿರು ಚಾವಣಿ, ಹೆಂಚಿನ ಮನೆಗಳಾಗಿದ್ದರಿಂದ ಬೆಂಕಿ ವ್ಯಾಪಿಸಿ, ಮೂರು ಮನೆಗಳು ಭಸ್ಮವಾಗಿವೆ.
















