ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸೆ ಸಮೀಪದ ಹೋಸತೋಟ ಗ್ರಾಮದ ಕನ್ಯಾಕುಮಾರಿ ದೇವಸ್ಥಾನದಲ್ಲಿ ಕಳ್ಳರು ದೇವಿಯ ಬೆಳ್ಳಿ ಮುಖವಾಡ ಹಾಗೂ ಹುಂಡಿಯ ಹಣವನ್ನು ದೋಚಿದ್ದಾರೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ಹೋಸತೋಟದ ಕನ್ಯಾಕುಮಾರಿ ದೇವಸ್ಥಾನದಲ್ಲಿ ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಬೆಳಿಗ್ಗೆ ಪೂಜೆಗೆ ಬಂದ ಅರ್ಚಕರು ದೇವಾಲಯದ ಹುಂಡಿ ಮುರಿದಿರುವುದು ಗಮನಿಸಿ, ಒಳಗೆ ಪರಿಶೀಲನೆ ನಡೆಸಿದಾಗ ದೇವಿಯ ಅಲಂಕಾರಕ್ಕೆ ಬಳಸಲಾಗುತ್ತಿದ್ದ ಬೆಳ್ಳಿ ಮುಖವಾಡ ಕಾಣೆಯಾಗಿರುವುದು ತಿಳಿದುಬಂದಿದೆ.
ಘಟನೆ ಕುರಿತು ತಕ್ಷಣವೇ ಶೃಂಗೇರಿ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳ ದೇವಸ್ಥಾನಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಭದ್ರತಾ ಕ್ರಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.












