ತರೀಕೆರೆ ತಾಲೂಕಿನ ಲಕ್ಕವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರಂಗೇನಹಳ್ಳಿಯಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣವನ್ನು ಪೊಲೀಸರು ಕೇವಲ 24 ಗಂಟೆಗಳಲ್ಲೇ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಗ್ರಾಮದ ಹಾಲಿನ ಡೈರಿ ಸಹಾಯಕ ಗಗನ್ (26) ಎಂಬಾತನನ್ನು ಬಂಧಿಸಲಾಗಿದ್ದು, ಆತನಿಂದ ಒಟ್ಟು ₹8,80,300 ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಏನಿದು ಪ್ರಕರಣ:
ಫೆಬ್ರವರಿ 21ರಂದು ರಂಗೇನಹಳ್ಳಿಯ ಕುಂಬಾರ ಬೀದಿಯ ನಿವಾಸಿಯೊಬ್ಬರು ಕುಟುಂಬ ಸಮೇತ ಬೆಂಗಳೂರಿನಲ್ಲಿ ನಡೆದ ಸಂಬಂಧಿಕರ ಮದುವೆಗೆ ತೆರಳಿದ್ದ ಸಂದರ್ಭದಲ್ಲಿ ಕಳ್ಳತನ ನಡೆದಿದೆ. ಫೆಬ್ರವರಿ 23ರ ರಾತ್ರಿ ಮನೆಗೆ ಮರಳಿದಾಗ ಮನೆಯ ಬಾಗಿಲು ಹಾಗೂ ಬೀರು ಒಡೆದು ಸುಮಾರು 46.400 ಗ್ರಾಂ ತೂಕದ ಚಿನ್ನಾಭರಣ ಮತ್ತು ನಗದು ಹಣ ಕಳುವಾಗಿರುವುದು ಗಮನಕ್ಕೆ ಬಂದಿದೆ.
ಈ ಕುರಿತು ಫೆಬ್ರವರಿ 24ರಂದು ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆಯೇ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದರು. ವೈಜ್ಞಾನಿಕ ವಿಧಾನಗಳನ್ನು ಅನುಸರಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದು, ಬಂಧಿತನಿಂದ ₹5,80,000 ಮೌಲ್ಯದ ಚಿನ್ನದ ಸರ, ಉಂಗುರಗಳು, ಕಿವಿಯೋಲೆಗಳು ಸೇರಿದಂತೆ ಚಿನ್ನಾಭರಣಗಳು ಹಾಗೂ ₹3,00,300 ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ್ ದಯಾಮ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ತರೀಕೆರೆ ವೃತ್ತ ನಿರೀಕ್ಷಕ ಗಿರೀಶ್ ಬಿ.ವಿ., ಲಕ್ಕವಳ್ಳಿ ಪಿಎಸ್‌ಐ ವಿಶ್ವನಾಥ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಕೇವಲ 24 ಗಂಟೆಗಳಲ್ಲೇ ಪ್ರಕರಣ ಭೇದಿಸಿ ಕಳುವಾದ ಮಾಲನ್ನು ಪತ್ತೆಹಚ್ಚಿದ ತಂಡದ ಕಾರ್ಯಕ್ಷಮತೆಯನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.












