ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ಕುಂತೂರು ಗ್ರಾಮದ ದೊಡ್ಡಹೊನ್ನೆಯ ಶ್ರೀ ವಾರಾಹೀ ಶ್ರೀ ಅಮ್ಮನವರ ಸನ್ನಿಧಾನದಲ್ಲಿ ಜುಲೈ 15ರಿಂದ 23ರವರೆಗೆ ಆಷಾಢ ನವರಾತ್ರಿ ಮಹೋತ್ಸವ ಭಕ್ತಿಭಾವದಿಂದ ನಡೆಯಲಿದೆ.
ಶ್ರೀಮಜ್ಜಗದ್ಗುರು ಶ್ರೀ ಶಂಕರಾಚಾರ್ಯ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾಪೀಠಾಧೀಶ್ವರರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರ ಹಾಗೂ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಪರಿಪೂರ್ಣ ಕೃಪಾಶೀರ್ವಾದದೊಂದಿಗೆ ಉತ್ಸವ ಆಯೋಜಿಸಲಾಗಿದೆ.

ಆಷಾಢ ಶುದ್ಧ ಪಾಡ್ಯವಾದ ಜುಲೈ 15ರ ಬುಧವಾರದಿಂದ ಆಷಾಢ ಶುದ್ಧ ನವಮಿಯಾದ ಜುಲೈ 23ರ ಗುರುವಾರದವರೆಗೆ ಪ್ರತಿದಿನ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ನವರಾತ್ರಿ ಅಂಗವಾಗಿ ಹೋಮ, ಪೂಜೆ, ಶ್ರೀ ಚಂಡಿಕಾ ಪಾರಾಯಣ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ.
ಉತ್ಸವದ ಅಂಗವಾಗಿ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಕುಟುಂಬ ಸಮೇತರಾಗಿ ಭಾಗವಹಿಸಿ, ಶ್ರೀ ವಾರಾಹೀ ಅಮ್ಮನವರ ಕೃಪಾಶೀರ್ವಾದಕ್ಕೆ ಪಾತ್ರರಾಗುವಂತೆ ದೇವಸ್ಥಾನದ ವತಿಯಿಂದ ಆಹ್ವಾನಿಸಲಾಗಿದೆ.












