ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ದೊಡ್ಡಹೊನ್ನೆಯ ಶ್ರೀ ವಾರಾಹಿ ಅಮ್ಮನವರ ದೇವಸ್ಥಾನಕ್ಕೆ ಇಂದು ಶ್ರೀ ಶ್ರೀ ಶ್ರೀ ತಾಳ್ಳಪಾಕ ಅನ್ನಮಾಚಾರ್ಯರ 12ನೇ ತಲೆಮಾರಿನ ವಂಶಸ್ಥರಾದ ಶ್ರೀ ತಾಳ್ಳಪಾಕ ಸ್ವಾಮಿಯವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ದೇವಸ್ಥಾನಕ್ಕೆ ಆಗಮಿಸಿದ ಶ್ರೀ ತಾಳ್ಳಪಾಕ ಸ್ವಾಮಿಯವರನ್ನು ದೇವಸ್ಥಾನದ ಆಡಳಿತ ಮಂಡಳಿ, ಅರ್ಚಕರು ಹಾಗೂ ಭಕ್ತರು ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಆಶೀರ್ವಚನ ಹಾಗೂ ಭಕ್ತರೊಂದಿಗೆ ಧಾರ್ಮಿಕ ಸಂವಾದವೂ ನಡೆಯಿತು.

ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ಸೇವೆಯಲ್ಲಿ ಮಹತ್ವದ ಕೈಂಕರ್ಯ ನಿರ್ವಹಿಸುತ್ತಿರುವ ಶ್ರೀ ತಾಳ್ಳಪಾಕ ಸ್ವಾಮಿಯವರು ಪ್ರತಿದಿನ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಗೆ ಮುಂಜಾನೆ ಸುಪ್ರಭಾತ ಸೇವೆಯಲ್ಲಿ ಅನ್ನಮಾಚಾರ್ಯರ ಕೀರ್ತನೆಗಳನ್ನು ಹಾಡಿ ಸ್ವಾಮಿಯನ್ನು ಎಬ್ಬಿಸುವ ಪವಿತ್ರ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಹಾಗೆಯೇ ರಾತ್ರಿ ಏಕಾಂತ ಸೇವೆಯ ಸಮಯದಲ್ಲಿ ಅನ್ನಮಾಚಾರ್ಯರ ಕೀರ್ತನೆಗಳನ್ನು ಗಾಯನ ಮಾಡಿ ಸ್ವಾಮಿಗೆ ಶಯನ ಸೇವೆ ಸಲ್ಲಿಸುವ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ.

ಇದೇ ಅಲ್ಲದೆ, ತಿರುಮಲದಲ್ಲಿ ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಕನ್ಯಾದಾತರಾಗಿ ಕೈಂಕರ್ಯವನ್ನು ನೆರವೇರಿಸುತ್ತಿರುವುದು ಭಕ್ತರಲ್ಲಿ ವಿಶೇಷ ಭಕ್ತಿಭಾವವನ್ನು ಮೂಡಿಸಿದೆ. ಶ್ರೀ ತಾಳ್ಳಪಾಕ ಸ್ವಾಮಿಯವರ ಭೇಟಿ ದೊಡ್ಡಹೊನ್ನೆ ಹಾಗೂ ಸುತ್ತಮುತ್ತಲಿನ ಭಕ್ತರಿಗೆ ಅಪರೂಪದ ಧಾರ್ಮಿಕ ಕ್ಷಣವಾಗಿ ಪರಿಣಮಿಸಿದ್ದು, ಭಕ್ತರು ಅವರ ಆಶೀರ್ವಾದ ಪಡೆದು ಸಂತಸ ವ್ಯಕ್ತಪಡಿಸಿದರು.













