ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಳೆದ ಎರಡು ದಿನಗಳಿಂದ ಕಾಫಿನಾಡು ಮಲೆನಾಡು ಭಾಗದಲ್ಲಿ ಭೂಮಿಗೆ ತೀರಾ ಹತ್ತಿರವಾಗಿ ಕಿರು ವಿಮಾನವೊಂದು ಅತ್ತಿತ್ತ ಹಾರಾಟ ನಡೆಸುತ್ತಿದ್ದರಿಂದ ಸ್ಥಳೀಯರಲ್ಲಿ ಆತಂಕ ಮತ್ತು ಕುತೂಹಲ ಉಂಟಾಗಿತ್ತು. ಮರಗಳ ಮೇಲ್ಭಾಗದಲ್ಲೇ ಕಡಿಮೆ ಎತ್ತರದಲ್ಲಿ ಹಾರುತ್ತಿದ್ದ ಈ ವಿಮಾನ ಯಾರದ್ದು? ಏಕೆ ಹಾರುತ್ತಿದೆ? ಎಂಬ ಪ್ರಶ್ನೆಗಳು ಸಾರ್ವಜನಿಕರಲ್ಲೂ ಹಾಗೂ ಪೊಲೀಸ್ ಇಲಾಖೆಯಲ್ಲೂ ಮೂಡಿದ್ದವು. ಇದೀಗ ಈ ಬಗ್ಗೆ ಸ್ಪಷ್ಟನೆ ಲಭ್ಯವಾಗಿದ್ದು, ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ವೈಜ್ಞಾನಿಕ ಉದ್ದೇಶಕ್ಕಾಗಿ ವಿಶೇಷ ಭೂ-ಭೌತಿಕ ಸಮೀಕ್ಷೆ (Geophysical Survey) ನಡೆಸಲು ಈ ಲಘು ವಿಮಾನ ಹಾರಾಟ ನಡೆಸಿರುವುದು ತಿಳಿದುಬಂದಿದೆ. Cessna 208B Grand Caravan ಮಾದರಿಯ ಈ ವಿಮಾನದ ನೋಂದಣಿ ಸಂಖ್ಯೆ VH&ZKA -VH ಅಂದರೆ ಇದು ಆಸ್ಟ್ರೇಲಿ ಯಾದಲ್ಲಿ ನೋಂದಾಯಿತವಾಗಿದೆ ಎಂಬುದು ತಿಳಿದು ಬಂದಿದೆ.
ಭೂಗರ್ಭದ ರಚನೆಗಳನ್ನು ಗಾಳಿಯಿಂದ ಮ್ಯಾಪಿಂಗ್ ಮಾಡುವ ವಿಶೇಷ ತಂತ್ರಜ್ಞಾನ ಹೊಂದಿರುವ ಈ ವಿಮಾನದ ಹಿಂಭಾಗದಲ್ಲಿ ಉದ್ದ ಸೂಜಿ ತರಹ ಕಾಣುವ ‘ಮ್ಯಾಗ್ನೆಟೋಮೀಟರ್ ಸ್ಟಿಂಗರ್’ ಸಾಧನ ಅಳವಡಿಸಲಾಗಿದೆ. ಇದು ಭೂಮಿಯ ಚುಂಬಕ ಕ್ಷೇತ್ರದ ವ್ಯತ್ಯಾಸಗಳನ್ನು ಅಳೆಯುವ ಮೂಲಕ ಭೂಗರ್ಭ ರಚನೆ, ಖನಿಜ ಸಂಪತ್ತು ಹಾಗೂ ಇತರೆ ಭೂವೈಜ್ಞಾನಿಕ ಮಾಹಿತಿಗಳನ್ನು ಸಂಗ್ರಹಿಸಲು ನೆರವಾಗುತ್ತದೆ.
ಮಂಗಳೂರು ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿರುವ ಈ ವಿಮಾನ ಚಿಕ್ಕಮಗಳೂರು ಹಾಗೂ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಜಿಗ್-ಜಾಗ್ ಅಥವಾ ಜಾಲರಿ ಮಾದರಿಯಲ್ಲಿ ಅದೇ ಪ್ರದೇಶದ ಮೇಲೆ ಹಲವು ಬಾರಿ ಹಾರಾಟ ನಡೆಸುತ್ತಿದೆ. ಕಡಿಮೆ ಎತ್ತರದಲ್ಲಿ ಹಾರುವುದು ಈ ಸಮೀಕ್ಷೆಯ ಭಾಗವಾಗಿದ್ದು, ಇದರಿಂದ ಖನಿಜ ಸಂಪತ್ತು, ಭೂಗರ್ಭ ಜಲ ಸಂಪನ್ಮೂಲ ಹಾಗೂ ಭೂಗರ್ಭದ ರಚನೆಗಳ ಕುರಿತು ನಿಖರ ಮಾಹಿತಿ ಸಂಗ್ರಹಿಸಲು ಸಾಧ್ಯವಾಗುತ್ತದೆ. ಇದು ಸಂಪೂರ್ಣವಾಗಿ ಅಧಿಕೃತ ಹಾಗೂ ವೈಜ್ಞಾನಿಕ ಉದ್ದೇಶಕ್ಕಾಗಿ ನಡೆಯುತ್ತಿರುವ ಕಾರ್ಯಾಚರಣೆ ಆಗಿದೆ.












