ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ)ಭೀಕರ ಬಿರುಗಾಳಿಗೆ ಶಾಲೆಯೊಂದರ ಮೇಲ್ಬಾವಣಿ ಹಾರಿಹೋದ ಘಟನೆ ಕಾಫಿನಾಡಿನ ಚಿಕ್ಕಮಗಳೂರು ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ಬೆಳವಾಡಿ ಗ್ರಾಮದ ಸರ್ಕಾರಿ ಶಾಲೆಯ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಹೆಂಚುಗಳು ರಭಸವಾದ ಗಾಳಿಗೆ ಹಾರಿ ನೆಲಕ್ಕೆ ಬಿದ್ದು ಪುಡಿಪುಡಿಯಾಗಿವೆ. ಅದೃಷ್ಟವಶಾತ್ ಮಧ್ಯಾಹ್ನ ಊಟದ ಸಮಯದಲ್ಲಿ ಈ ಘಟನೆ ನಡೆದಿದೆ. ಶಾಲಾ ಮಕ್ಕಳು ಕೊಠಡಿಯಿಂದ ಹೊರಬಂದು ಊಟಕ್ಕೆ ಕುಳಿತಿದ್ದರಿಂದ ಭಾರೀ ಅಪಾಯ ತಪ್ಪಿದೆ.
ಈ ವೇಳೆ ಅಲ್ಲಿಯೇ ಇದ್ದ ಇಬ್ಬರು ವಿದ್ಯಾರ್ಥಿಗಳ ಮೇಲೆ ಹೆಂಚುಗಳು ಬಿದ್ದು ಸಣ್ಣಪುಟ್ಟ ಗಾಯಗಳಾಗಿದ್ದು, ಸದ್ಯ ಮಕ್ಕಳಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಬೆಳವಾಡಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಬಿರುಗಾಳಿಯಿಂದಾಗಿ ಶಾಲಾ ಕಟ್ಟಡಕ್ಕೆ ಆಗಿರುವ ಹಾನಿಯ ಬಗ್ಗೆ ಪರಿಶೀಲನೆ ನಡೆಸಿದ್ದು, ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.












