
ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಪಟ್ಟಣದಲ್ಲಿ ಮೊಬೈಲ್ ಬ್ಯಾಂಕಿಂಗ್ ಅಪ್‌ಡೇಟ್ ಮಾಡುವ ನೆಪದಲ್ಲಿ 1.97 ಲಕ್ಷ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

Axis Bankನ ಬೆಂಗಳೂರು ಹಲಸೂರು ಶಾಖೆಯಲ್ಲಿ ಖಾತೆ ಹೊಂದಿರುವ ಬಾಳೇಹೊನ್ನೂರಿನ ವ್ಯಕ್ತಿಯೊಬ್ಬರು. ಕ್ರೆಡಿಟ್ ಕಾರ್ಡ್ ವ್ಯವಹಾರದ ಪರಿಮಿತಿ ಹೆಚ್ಚಿಸಲು ಮೊಬೈಲ್ ಬ್ಯಾಂಕಿಂಗ್ ಆಪ್‌ಗೆ ಲಾಗಿನ್ ಆಗಲು ಪ್ರಯತ್ನಿಸಿದಾಗ ಆಪ್ ಸರಿಯಾಗಿ ಕಾರ್ಯನಿರ್ವಹಿಸಿಲ್ಲ. ಈ ವೇಳೆ “ಆಕ್ಸಿಸ್ ಬ್ಯಾಂಕ್ ಕಸ್ಟಮರ್ ಕೇರ್”ನಿಂದ ಮಾತನಾಡುತ್ತಿರುವುದಾಗಿ ಹೇಳಿಕೊಂಡು ಸಂಜೀವ ಎಂಬಾತ ಕರೆ ಮಾಡಿದ್ದಾನೆ. ಕ್ರೆಡಿಟ್ ಕಾರ್ಡ್‌ನ ಕೊನೆಯ ನಾಲ್ಕು ಅಂಕಿಗಳನ್ನು ಕೇಳಿ, ಪರಿಮಿತಿ ಹೆಚ್ಚಿಸಲು ಲಿಂಕ್ ಒಪನ್ ಮಾಡಲು ಸೂಚಿಸಿದ್ದಾನೆ. ಆಪ್ ಓಪನ್ ಆಗದ ಹಿನ್ನೆಲೆ ಗೂಗಲ್ ಕ್ರೋಮ್ ಮೂಲಕ ಲಿಂಕ್ ತೆರೆಯುವಂತೆ ತಿಳಿಸಿದ್ದಾನೆ.

ಲಿಂಕ್ ತೆರೆಯುತ್ತಿದ್ದಂತೆಯೇ ಬ್ಯಾಂಕ್ ವೆಬ್ ಅಪ್ಲಿಕೇಶನ್‌ನಂತೆಯೇ ಕಾಣಿಸಿಕೊಂಡಿದ್ದು, ಲಾಗಿನ್ ಮಾಡಲು ಮೊಬೈಲ್ ಸಂಖ್ಯೆ ಹಾಗೂ ಕ್ರೆಡಿಟ್ ಕಾರ್ಡ್ ವಿವರಗಳನ್ನು ನಮೂದಿಸಿದ್ದಾರೆ. ಬಳಿಕ “ಇನ್‌ಕರೆಕ್ಷನ್ ಸಪೋರ್ಟ್” ಎಂಬ ಸಂದೇಶ ಬಂದಿದ್ದು, ಕೆಲವೇ ಕ್ಷಣಗಳಲ್ಲಿ ವ್ಯಕ್ತಿಯ ಕ್ರೆಡಿಟ್ ಕಾರ್ಡ್‌ನಿಂದ 1,97,841 ರೂ. ಹಣ ‘ರಿಲಯನ್ಸ್ ರಿಟೇಲ್’ ಹೆಸರಿನಲ್ಲಿ ಡೆಬಿಟ್ ಆಗಿದೆ. ಹಣ ಕಟ್ ಆಗುತ್ತಿದ್ದಂತೆಯೇ ಕರೆ ಮಾಡಿದ ವ್ಯಕ್ತಿ ಫೋನ್ ಕಟ್ ಮಾಡಿದ್ದಾನೆ. ಮೋಸ ಹೋಗಿರುವುದು ಅರಿತ ವ್ಯಕ್ತಿ ತಕ್ಷಣವೇ ಬಾಳೆಹೊನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಾರ್ವಜನಿಕರು ಅಪರಿಚಿತರಿಂದ ಬರುವ ಕರೆಗಳು ಹಾಗೂ ಲಿಂಕ್‌ಗಳನ್ನು ತೆರೆಯುವ ಮೊದಲು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
















