
ಕಳಸ: (ನ್ಯೂಸ್ ಮಲ್ನಾಡ್ ವರದಿ) ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದ ಆವರಣದಲ್ಲಿ ಭಾನುವಾರ 14 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಕ್ಷೇತ್ರದ ಗ್ರಾಮೀಣಾಭಿವೃದ್ಧಿ ಯೋಜನೆಯ ಸಪ್ತಪದಿ ವೇದಿಕೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದೇವಸ್ಥಾನದ ಮುಖ್ಯಸ್ಥ ಭೀಮೇಶ್ವರ ಜೋಷಿ-ರಾಜಲಕ್ಷ್ಮಿ ದಂಪತಿ ವಧು-ವರರಿಗೆ ಮಾಂಗಲ್ಯ ಸರ, ಕಾಲುಂಗುರ ವಿತರಿಸಿದರು. 10 ನಿಮಿಷದಲ್ಲಿ ಸರಳವಾಗಿ ವಿವಾಹದ ವಿಧಿಗಳನ್ನು ಉದಯಶಂಕರ ಶರ್ಮಾ ನೆರವೇರಿಸಿದರು.

ಉದ್ಘಾಟಿಸಿ ಮಾತನಾಡಿದ ಶಾಸಕಿ ನಯನಾ ಮೋಟಮ್ಮ, ಹೊರನಾಡು ಕ್ಷೇತ್ರದ ಗ್ರಾಮೀಣಾಭಿವೃದ್ಧಿ ಯೋಜನೆಯು ಅನೇಕ ಬಡ ಕುಟುಂಬಗಳಿಗೆ ಅನುಕೂಲ ಕಲ್ಪಿಸಿದೆ. ದಶಕದಿಂದ ಈ ಕೆಲಸ ಮಾಡುತ್ತಾ ಕ್ಷೇತ್ರವು ಫಲಾನುಭವಿಗಳ ಜೀವನದ ಗುಣಮಟ್ಟ ಹೆಚ್ಚಿಸಿದೆ ಎಂದರು.

ವಿಧಾನಪರಿಷತ್ ಸದಸ್ಯ ಭೋಜೇಗೌಡ ಮಾತನಾಡಿ, ಹೊರನಾಡಿನಲ್ಲಿ ಈವರೆಗೆ 942 ಜೋಡಿಗಳು ಸಾಮೂಹಿಕ ವಿವಾಹದ ಅನುಕೂಲ ಪಡೆದಿವೆ. ಕ್ಷೇತ್ರದ ಸಮಾಜಮುಖಿ ಕೆಲಸ ಇನ್ನಷ್ಟು ವಿಸ್ತರಣೆ ಆಗಲಿ ಎಂದು ಆಶಿಸಿದರು.
ಕ್ಷೇತ್ರದ ಗ್ರಾಮೀಣಾಭಿವೃದ್ಧಿ ಯೋಜನೆ ಬಗ್ಗೆ ಮಾಹಿತಿ ನೀಡಿದ ಗಿರಿಜಾಶಂಕರ ಜೋಷಿ, ಗೃಹಲಕ್ಷ್ಮಿ, ಆನಂದ ಜ್ಯೋತಿ, ಸಪ್ತಪದಿ, ಅನ್ನದಾಸೋಹ, ಮಹಿಳಾ ಸಬಲೀಕರಣ ಯೋಜನೆಯಲ್ಲಿ ಕಳೆದ 35 ವರ್ಷದಲ್ಲಿ ಕ್ಷೇತ್ರವು ₹ 20 ಕೋಟಿಗೂ ಹೆಚ್ಚು ವೆಚ್ಚಮಾಡಿದೆ ಎಂದರು.
ವೇದ ಪಾರಂಗತ ಚಂದ್ರಶೇಖರ್ ಭಟ್, ಸಹಕಾರಿ ಧುರೀಣ ಮಂಜಪ್ಪಯ್ಯ ಹಾಗೂ ಹರಿಕಥಾ ದಾಸ ಪುಂಡರೀಕ ಭಾಗವತ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮುಖಂಡರಾದ ರಾಜಗೋಪಾಲ ಜೋಷಿ, ರಾಜೇಂದ್ರ ಹಿತ್ತುಮಕ್ಕಿ, ಶ್ರೇಣಿಕ, ಸಂತೋಷ್ ಹಿನಾರಿ, ಶ್ರೀಕಾಂತ್ ಕೆಳಭಾಗ ಭಾಗವಹಿಸಿದ್ದರು.













