ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಬಣಕಲ್ ಹೋಬಳಿಯ ಕೋಗಿಲೆ ಗ್ರಾಮದಲ್ಲಿ ಕಾಡು ಹಂದಿ ದಾಳಿ ನಡೆಸಿದ ಪರಿಣಾಮ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ಗಾಯಗೊಂಡವರನ್ನು ಲಕ್ಷ್ಮಿ (48) ಎಂದು ಗುರುತಿಸಲಾಗಿದೆ.
ಮೂಲತಃ ಆಲೂರಿನ ಜೋಗಣಕೆರೆಯ ಚಕ್ರಮಣಿ ಗ್ರಾಮದ ನಿವಾಸಿಗಳಾಗಿದ್ದು, ಸಂಬಂಧಿಕರ ಮನೆಗೆ ಸುಗ್ಗಿ ಹಬ್ಬದ ನಿಮಿತ್ತ ಕೋಗಿಲೆ ಗ್ರಾಮಕ್ಕೆ ಆಗಮಿಸಿದ್ದರು. ಬೆಳಿಗ್ಗೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಚಾನಕ್ ಕಾಡು ಹಂದಿ ದಾಳಿ ನಡೆಸಿದ್ದು, ಹಂದಿ ಗುದ್ದಿದ ಪರಿಣಾಮ ಲಕ್ಷ್ಮಿಗೆ ಗಂಭೀರ ಪೆಟ್ಟುಗಳಾಗಿವೆ.

ತಕ್ಷಣವೇ ಸ್ಥಳೀಯರು ಗಾಯಾಳುವನ್ನು ಮೂಡಿಗೆರೆ ಆಸ್ಪತ್ರೆಗೆ ರವಾನಿಸಿದ್ದು, ಚಿಕಿತ್ಸೆ ಮುಂದುವರಿದಿದೆ. (ವರದಿ- ತನು ಕೊಟ್ಟಿಗೆಹಾರ)














