ಎನ್. ಆರ್. ಪುರ: (ನ್ಯೂಸ್ ಮಲ್ನಾಡ್ ವರದಿ) ಅತಿಯಾದ ಮದ್ಯಪಾನ ಮಾಡಿದ್ದ ತಾಲ್ಲೂಕಿನ ಕೊನಡಿ ಗ್ರಾಮದ ಮಕ್ಕಿಕೊಪ್ಪ ನಿವಾಸಿ ಪ್ರೇಮಾ (56) ಎಂಬುವರು ಸೋಮವಾರ ಮೃತಪಟ್ಟಿದ್ದಾರೆ.
‘ನಮಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಹಿರಿಯ ಮಗಳು ಮಾನಸಿಕ ಅಸ್ವಸ್ಥೆ. ಮಗಳ ದಿನನಿತ್ಯದ ಕೆಲಸವನ್ನು ಮಾಡುತ್ತಿದ್ದ ಪತ್ನಿ, ಮದ್ಯಪಾನದ ಅಭ್ಯಾಸ ಮಾಡಿಕೊಂಡಿದ್ದರು. ಕಳೆದ ಒಂದು ವರ್ಷದಿಂದ ಅಲರ್ಜಿಯಿಂದ ಬಳಲುತ್ತಿದ್ದು, ಚಿಕಿತ್ಸೆ ಕೊಡಿಸಿದರೂ ಗುಣವಾಗಿರಲಿಲ್ಲ. ನಾಲ್ಕು ದಿನಗಳ ಹಿಂದೆ ಆಕೆಯ ತಾಯಿ ಮೃತಪಟ್ಟಿದ್ದು, ಇದರಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಏ. 26ರಂದು ಬೆಳಿಗ್ಗೆ ತಿಂಡಿ ತಿಂದ ನಂತರ ಮದ್ಯಪಾನ ಮಾಡಿ ಊಟ ಮಾಡದೇ ಮಲಗಿದ್ದರು. ಏ. 27ರ ಬೆಳಿಗ್ಗೆ ಅಸ್ಥಸ್ಥರಾಗಿದ್ದ ಅವರನ್ನು ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದೆವು. ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ’ ಎಂದು ಮೃತರ ಪತಿ ವೆಂಕಟೇಶ್ ದೂರಿನಲ್ಲಿ ತಿಳಿಸಿದ್ದಾರೆ.














