ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ತಾಲ್ಲೂಕು ಕಚೇರಿ ಹಾಗೂ ಭಾರತೀ ಬೀದಿಯ ಮೆಹಬೂಬ್ ಝಹೂಷ್ ದರ್ಗಾಕ್ಕೆ ಹೊಂದಿಕೊಂಡಂತೆ ರಾಜ್ಯ ವಿಪತ್ತು ಉಪಶಮನ ನಿಧಿ (SDMF) ಅಡಿಯಲ್ಲಿ ನಿರ್ಮಿಸಲಾದ ಕಾಂಕ್ರೀಟ್ ತಡೆಗೋಡೆ ಬಿರುಕು ಬಿಟ್ಟಿರುವ ಹಿನ್ನೆಲೆಯಲ್ಲಿ ಸರ್ಕಾರ ತುರ್ತು ಕ್ರಮವಾಗಿ ವಿಶೇಷ ತಾಂತ್ರಿಕ ಸಮಿತಿಯನ್ನು ರಚಿಸಿ ಜಂಟಿ ಸ್ಥಳ ಪರಿಶೀಲನೆಗೆ ಆದೇಶಿಸಿದೆ.
ಸರ್ಕಾರದ ಆದೇಶದ ಪ್ರಕಾರ, ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ ನಿರ್ಮಿಸಲಾದ ಈ ತಡೆಗೋಡೆ ಇತ್ತೀಚಿನ ಭಾರಿ ಮಳೆಯಿಂದ ಬಿರುಕು ಬಿಟ್ಟಿದೆ ಎಂದು ಶೃಂಗೇರಿ ತಹಶೀಲ್ದಾರ್ ವರದಿ ಸಲ್ಲಿಸಿದ್ದರು. ತಡೆಗೋಡೆಯ ಕೆಳಭಾಗದಲ್ಲಿ ಪ್ರಮುಖ ರಸ್ತೆ ಆಗಿರುವ ಭಾರತೀ ಬೀದಿ, ಅದರ ಪಕ್ಕದಲ್ಲಿ ಸಾರ್ವಜನಿಕರ ವಾಸದ ಮನೆಗಳು ಹಾಗೂ ಸಕ್ರಿಯ ಅಂಗಡಿ ಮಳಿಗೆಗಳಿರುವುದರಿಂದ ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ನಿವಾಸಿಗಳು ಹಾಗೂ ವ್ಯಾಪಾರಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಘಟನೆಯ ಗಂಭೀರತೆಯನ್ನು ಪರಿಗಣಿಸಿರುವ ಸರ್ಕಾರ, ತಡೆಗೋಡೆಯ ತಾಂತ್ರಿಕ ದೋಷಗಳು, ಬಿರುಕುಗಳಿಗೆ ಕಾರಣಗಳು ಹಾಗೂ ಅಗತ್ಯ ತುರ್ತು ಸುರಕ್ಷತಾ ಕ್ರಮಗಳ ಕುರಿತು ಸಮಗ್ರ ಪರಿಶೀಲನೆ ನಡೆಸಲು ಮೂರು ಸದಸ್ಯರ ವಿಶೇಷ ತಾಂತ್ರಿಕ ಸಮಿತಿಯನ್ನು ರಚಿಸಿದೆ.
ಚಿಕ್ಕಮಗಳೂರು ಲೋಕೋಪಯೋಗಿ ಇಲಾಖೆ (PWD) ವಿಭಾಗದ ಕಾರ್ಯಪಾಲಕ ಅಭಿಯಂತರರು (EE) – ಅಧ್ಯಕ್ಷರು, ಹಾಸನ ಗುಣಮಟ್ಟ ನಿಯಂತ್ರಣ (Quality Control) ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು (AEE) – ಸದಸ್ಯರು, ತಾಂತ್ರಿಕ ತಜ್ಞರು – ಸದಸ್ಯರ ಸಮಿತಿಯನ್ನು ರಚಿಸಿದೆ.
ಸಮಿತಿ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ತಡೆಗೋಡೆಯ ರಚನಾತ್ಮಕ ಸ್ಥಿರತೆ (Structural Stability) ಕುರಿತು ಸಮಗ್ರ ಪರಿಶೀಲನೆ ನಡೆಸಬೇಕು. ಕಾಮಗಾರಿಯಲ್ಲಿ ಗುಣಮಟ್ಟದ ಕೊರತೆ ಅಥವಾ ತಾಂತ್ರಿಕ ದೋಷಗಳಿವೆಯೇ ಎಂಬುದನ್ನು ಗುಣಮಟ್ಟ ನಿಯಂತ್ರಣ (QC) ಮಾನದಂಡಗಳ ಪ್ರಕಾರ ಪರಿಶೀಲಿಸಬೇಕು. ಮಳೆಗಾಲದಲ್ಲಿ ಸಾರ್ವಜನಿಕರು, ಮೆಹಬೂಬ್ ಝಹೂಷ್ ದರ್ಗಾ ಹಾಗೂ ತಾಲ್ಲೂಕು ಕಚೇರಿ ಕಟ್ಟಡಗಳಿಗೆ ಯಾವುದೇ ಅಪಾಯ ಉಂಟಾಗದಂತೆ ಕೈಗೊಳ್ಳಬೇಕಾದ ತುರ್ತು ತಾತ್ಕಾಲಿಕ ಸುರಕ್ಷತಾ ಕ್ರಮಗಳು ಮತ್ತು ಶಾಶ್ವತ ಪರಿಹಾರಗಳ ಕುರಿತು ಸ್ಪಷ್ಟ ತಾಂತ್ರಿಕ ಶಿಫಾರಸುಗಳನ್ನು ಒಳಗೊಂಡ ಜಂಟಿ ಪರಿಶೀಲನಾ ವರದಿಯನ್ನು ಮೂರು ದಿನಗಳೊಳಗೆ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಲಾಗಿದೆ.












