ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ರಾಷ್ಟ್ರೀಯ ಹೆದ್ದಾರಿ–169ರ ತನಿಕೋಡುದಿಂದ ಎಸ್.ಕೆ. ಬಾರ್ಡರ್ವರೆಗೆ 12 ಟನ್ಗಿಂತ ಅಧಿಕ ಭಾರದ ಸರಕು ಸಾಗಾಣಿಕೆ ವಾಹನಗಳ ಸಂಚಾರವನ್ನು ಸೆಪ್ಟೆಂಬರ್ 30 ನಿಷೇಧಿಸಿ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಆದೇಶ ಹೊರಡಿಸಿದ್ದಾರೆ.
1950–60ರ ಅವಧಿಯಲ್ಲಿ ನಿರ್ಮಾಣಗೊಂಡಿರುವ ಕಲ್ಲಿನ ಸೇತುವೆಗಳು ಶಿಥಿಲಾವಸ್ಥೆಗೆ ತಲುಪಿರುವುದು, ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು ಕೊರೆತ ಉಂಟಾಗಿರುವುದು ಹಾಗೂ ರಸ್ತೆ ಕಿರಿದಾಗಿರುವ ಕಾರಣ ಭಾರಿ ವಾಹನಗಳ ಸಂಚಾರದಿಂದ ಅಪಾಯ ಸಂಭವಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ 12 ಟನ್ಗಿಂತ ಹೆಚ್ಚಿನ ಭಾರದ ಟಿಪ್ಪರ್, ಲಾರಿಗಳು ಹಾಗೂ ಕಟ್ಟಡ ನಿರ್ಮಾಣ ಸಾಮಗ್ರಿ ಸಾಗಿಸುವ ವಾಹನಗಳು ಸೇರಿದಂತೆ ಭಾರಿ ವಾಹನಗಳಿಗೆ ಈ ಮಾರ್ಗದಲ್ಲಿ ಸಂಚಾರಕ್ಕೆ ಅವಕಾಶ ಇರುವುದಿಲ್ಲ.

ಭಾರಿ ವಾಹನಗಳಿಗಾಗಿ ಬದಲಿ ಮಾರ್ಗ:
ಚಿಕ್ಕಮಗಳೂರಿನಿಂದ ಬರುವ ವಾಹನಗಳು ಬಾಳೆಹೊನ್ನೂರು–ಮಾಗುಂಡಿ–ಕಳಸ–ಕುದುರೆಮುಖ–ಎಸ್.ಕೆ. ಬಾರ್ಡರ್ ಮಾರ್ಗವಾಗಿ ಸಂಚರಿಸಬೇಕು. ನರಸಿಂಹರಾಜಪುರ ಕಡೆಯಿಂದ ಬರುವ ವಾಹನಗಳೂ ಇದೇ ಮಾರ್ಗ ಬಳಸಬೇಕು. ಕೊಪ್ಪ ಕಡೆಯಿಂದ ಬರುವ ವಾಹನಗಳು ಕೊಪ್ಪ–ಜಯಪುರ–ಬಾಳೆಹೊನ್ನೂರು–ಮಾಗುಂಡಿ–ಕಳಸ–ಕುದುರೆಮುಖ–ಎಸ್.ಕೆ. ಬಾರ್ಡರ್ ಮಾರ್ಗವಾಗಿ ಸಂಚರಿಸುವಂತೆ ಸೂಚಿಸಲಾಗಿದೆ.
ಜಿಲ್ಲಾಡಳಿತದ ಈ ಆದೇಶ ತಕ್ಷಣದಿಂದಲೇ ಜಾರಿಗೆ ಬಂದಿದ್ದು, ವಾಹನ ಸವಾರರು ಮತ್ತು ಸಾರಿಗೆ ಸಂಸ್ಥೆಗಳು ಸೂಚಿಸಿರುವ ಬದಲಿ ಮಾರ್ಗಗಳನ್ನು ಪಾಲಿಸಿ ಸಹಕರಿಸುವಂತೆ ಮನವಿ ಮಾಡಲಾಗಿದೆ.












