ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಹಾಗೂ ಕರ್ನಾಟಕ ಫಿಲಂ ಚೇಂಬರ್‌ನ ಮಾಜಿ ಅಧ್ಯಕ್ಷ ಬಾಮಾ ಹರೀಶ್ ಅವರ ಪುತ್ರ ಉಲ್ಲಾಸ್ (29) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಉಲ್ಲಾಸ್ ಅವರು ಸ್ನೇಹಿತರೊಂದಿಗೆ ಶಿವಮೊಗ್ಗ ಜಿಲ್ಲೆಯ ಕೊಡಚಾದ್ರಿಗೆ ಟ್ರೆಕ್ಕಿಂಗ್‌ಗೆ ತೆರಳಿದ್ದ ವೇಳೆ ಏಕಾಏಕಿ ಅಸ್ವಸ್ಥಗೊಂಡಿದ್ದಾರೆ. ಈ ವೇಳೆ ಅವರಿಗೆ ಹೃದಯಾಘಾತ ಕಾಣಿಸಿಕೊಂಡಿದ್ದು, ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಉಲ್ಲಾಸ್ ಅವರು ಚಿತ್ರರಂಗದಲ್ಲೂ ಸಕ್ರಿಯರಾಗಿದ್ದು, ‘ಸ್ಕೂಲ್ ಆಫ್ ಸಿನಿಮಾಸ್’ ಹೆಸರಿನ ನಾಟಕ ಹಾಗೂ ಸಿನಿಮಾ ತರಬೇತಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದರು. ಅವರ ಅಕಾಲಿಕ ನಿಧನದಿಂದ ಚಿತ್ರರಂಗದ ಗಣ್ಯರು ಹಾಗೂ ಸ್ನೇಹಿತರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಷ್ಟೇ ಉಲ್ಲಾಸ್ ಅವರಿಗೆ ನಿಶ್ಚಿತಾರ್ಥ ನೆರವೇರಿತ್ತು. ಮುಂಬರುವ ಡಿಸೆಂಬರ್‌ನಲ್ಲಿ ವಿವಾಹ ನಿಗದಿಯಾಗಿತ್ತು. ಹೊಸ ಜೀವನದ ಕನಸು ಕಾಣುತ್ತಿದ್ದ ಯುವಕನ ಅಕಾಲಿಕ ಸಾವಿನಿಂದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು, ಬಂಧು-ಬಳಗ ಹಾಗೂ ಸ್ನೇಹಿತರಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
















