ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿಯಿಂದ ಜಯಪುರ ಮಾರ್ಗವಾಗಿ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನ ಸಮಯ ಬದಲಾವಣೆಗೊಂಡಿರುವುದರಿಂದ ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥರಿಗೆ ತೀವ್ರ ಅನಾನುಕೂಲ ಉಂಟಾಗಿದ್ದು, ಹಿಂದಿನ ವೇಳಾಪಟ್ಟಿಯಂತೆ ಬಸ್ ಸಂಚರಿಸುವಂತೆ ಒತ್ತಾಯಿಸಿ ಚಿಕ್ಕಮಗಳೂರು ವಿಭಾಗದ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ವಿದ್ಯಾರ್ಥಿಗಳು ಮತ್ತು ಉದ್ಯೋಗಸ್ಥರು ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ.
ಈ ಹಿಂದೆ ಶೃಂಗೇರಿಯಿಂದ ಸಂಜೆ 5 ಗಂಟೆಗೆ ಹೊರಡುತ್ತಿದ್ದ ಬಸ್ ಜಯಪುರ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥರಿಗೆ ಅನುಕೂಲಕರವಾಗಿತ್ತು. ಆದರೆ ಇತ್ತೀಚೆಗೆ ಬಸ್ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿ ಸಂಜೆ 5.30ರ ನಂತರ ಸಂಚರಿಸಲಾಗುತ್ತಿದೆ. ಇದರಿಂದ ಪ್ರಯಾಣಿಕರು ಬಸ್‌ಗಾಗಿ ಹೆಚ್ಚು ಸಮಯ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಗ್ರಾಮೀಣ ಭಾಗಗಳಿಂದ ಶಾಲೆ ಹಾಗೂ ಕೆಲಸಕ್ಕೆ ಆಗಮಿಸುವ ಅನೇಕ ವಿದ್ಯಾರ್ಥಿಗಳು ಮತ್ತು ಉದ್ಯೋಗಸ್ಥರು ಈ ಬಸ್‌ನ್ನೇ ಅವಲಂಬಿಸಿದ್ದು, ಸಮಯ ಬದಲಾವಣೆಯಿಂದ ಆಟೋ ಬಾಡಿಗೆ ಮಾಡಿಕೊಂಡು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಕಾಡು ಪ್ರದೇಶಗಳಲ್ಲಿರುವ ಮನೆಗಳಿಗೆ ತಲುಪಲು ಕೆಲವರು ಒಂಟಿಯಾಗಿ ನಡೆದುಕೊಂಡು ಹೋಗಬೇಕಾಗಿರುವುದರಿಂದ ಸುರಕ್ಷತೆಯ ಸಮಸ್ಯೆಯೂ ಎದುರಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ವಿದ್ಯಾರ್ಥಿಗಳು ಮತ್ತು ಉದ್ಯೋಗಸ್ಥರ ಅನುಕೂಲಕ್ಕಾಗಿ ಈ ಹಿಂದೆ ಇದ್ದಂತೆ ಸಂಜೆ 5 ಗಂಟೆಗೆ ಬಸ್ ಸಂಚರಿಸುವ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. (ವರದಿ- ಶಶಿ ಬೆತ್ತದಕೊಳಲು)
















