ಜಯಪುರ: ಕೆಂಪೇಗೌಡರ ಆದರ್ಶಗಳನ್ನು ಯುವ ಸಮುದಾಯ ಅಳವಡಿಸಿಕೊಳ್ಳಬೇಕು: ಕಿಬ್ಳಿ ಪ್ರಸನ್ನಕುಮಾರ್

ಜಯಪುರ: (ನ್ಯೂಸ್ ಮಲ್ನಾಡ್ ವರದಿ) ನಾಡಪ್ರಭು ಕೆಂಪೇಗೌಡರು ಕೇವಲ ಉತ್ತಮ ಆಡಳಿತಗಾರರಷ್ಟೇ ಅಲ್ಲ, ದೇಶ ಕಂಡ ಶ್ರೇಷ್ಠ ಇಂಜಿನಿಯರ್, ನೀರಾವರಿ ತಜ್ಞ, ಮಾರುಕಟ್ಟೆ ವ್ಯವಸ್ಥಾಪಕ ಹಾಗೂ ಸಾಮಾಜಿಕ ಸುಧಾರಕರಾಗಿದ್ದರು. ಅವರ ದೂರದೃಷ್ಟಿ ಮತ್ತು ಯೋಜನಾಬದ್ಧ ಆಡಳಿತದಿಂದಲೇ ಬೆಂಗಳೂರಿನಂತಹ ವ್ಯವಸ್ಥಿತ ನಗರ ನಿರ್ಮಾಣ ಸಾಧ್ಯವಾಯಿತು ಎಂದು ಯುವ ಒಕ್ಕಲಿಗ ವೇದಿಕೆಯ ಗೌರವಾಧ್ಯಕ್ಷ ಕಿಬ್ಳಿ ಪ್ರಸನ್ನಕುಮಾರ್ ಹೇಳಿದರು.

ಹೇರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೂಬ್ಳದಲ್ಲಿ ಹೇರೂರು ಯುವ ಒಕ್ಕಲಿಗ ವೇದಿಕೆಯ ನೇತೃತ್ವದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಂಪೇಗೌಡರು ನೀರಾವರಿಗಾಗಿ ಕೆರೆಗಳನ್ನು, ವ್ಯಾಪಾರ ವಹಿವಾಟಿಗೆ ಮಾರುಕಟ್ಟೆಗಳನ್ನು ಹಾಗೂ ಧಾರ್ಮಿಕ ಕ್ಷೇತ್ರದ ಅಭಿವೃದ್ಧಿಗಾಗಿ ದೇವಸ್ಥಾನಗಳನ್ನು ಸೂಕ್ತ ಸ್ಥಳಗಳಲ್ಲಿ ನಿರ್ಮಿಸುವ ಮೂಲಕ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದರು. ಅವರ ಆದರ್ಶಗಳನ್ನು ಯುವಜನತೆ ಅಳವಡಿಸಿಕೊಂಡು ಪರೋಪಕಾರ ಹಾಗೂ ಸಮಾಜಮುಖಿ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.

ವೇದಿಕೆಯ ಕಾರ್ಯದರ್ಶಿ ವರುಣ್ ಬಿ.ಎಲ್. ಮಾತನಾಡಿ, ಕೆಂಪೇಗೌಡರು ಕೇವಲ ತಮ್ಮ ಸಮುದಾಯದ ಅಭಿವೃದ್ಧಿಗಷ್ಟೇ ಸೀಮಿತವಾಗದೆ, ಎಲ್ಲ ಸಮುದಾಯಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ದೂರದೃಷ್ಟಿಯಿಂದ ಬೆಂಗಳೂರು ನಗರವನ್ನು ನಿರ್ಮಿಸಿದರು. ವ್ಯಾಪಾರ ವೃದ್ಧಿಗೆ ಪೇಟೆಗಳನ್ನು ನಿರ್ಮಿಸಿ, ಕುಲಕಸಬುಗಳಿಗೆ ಉತ್ತೇಜನ ನೀಡಿದರು. ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಗುಡಿ-ಗೋಪುರಗಳನ್ನು ನಿರ್ಮಿಸಿ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದರು ಎಂದು ಹೇಳಿದರು.

ಮುಖಂಡ ಕುಕ್ಕುಡಿಗೆ ರವೀಂದ್ರ ಮಾತನಾಡಿ, ಕೆಂಪೇಗೌಡರ ಜಯಂತಿಯ ಅಂಗವಾಗಿ ವಿದ್ಯಾರ್ಥಿಗಳು, ರೋಗಿಗಳು ಹಾಗೂ ಸರ್ಕಾರಿ ಸಂಸ್ಥೆಗಳಿಗೆ ಅಗತ್ಯ ವಸ್ತುಗಳನ್ನು ವಿತರಿಸಿರುವ ಹೇರೂರು ಯುವ ಒಕ್ಕಲಿಗ ವೇದಿಕೆಯ ಸಾಮಾಜಿಕ ಸೇವೆ ಶ್ಲಾಘನೀಯವಾಗಿದೆ. ಮಹನೀಯರ ಜಯಂತಿಯನ್ನು ಆಚರಿಸುವುದರ ಜೊತೆಗೆ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ ಎಂದು ತಿಳಿಸಿದರು.

ಕಾರ್ಯಕ್ರಮದ ಬಳಿಕ ಜಯಪುರ ಸರ್ಕಾರಿ ಆಸ್ಪತ್ರೆಗೆ ಗಡಿಯಾರ ಹಾಗೂ ರಕ್ತದೊತ್ತಡ (ಬಿಪಿ) ತಪಾಸಣೆ ಯಂತ್ರವನ್ನು ವಿತರಿಸಲಾಯಿತು. ಅಲ್ಲದೆ ರೋಗಿಗಳಿಗೆ ಬ್ರೆಡ್ ಮತ್ತು ಹಣ್ಣುಗಳನ್ನು ನೀಡಲಾಯಿತು. ಜಯಪುರ ಸರ್ಕಾರಿ ಬಾಲಕರ ವಸತಿ ನಿಲಯಕ್ಕೆ ಗಡಿಯಾರ, ವಿದ್ಯಾರ್ಥಿಗಳಿಗೆ ಟೋಪಿ ಹಾಗೂ ಚಾಪೆಗಳನ್ನು ವಿತರಿಸಲಾಯಿತು. ಇದೇ ವೇಳೆ ಜಯಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕೆಂಪೇಗೌಡ ಜಯಂತಿಯ ಅಂಗವಾಗಿ ಸಿಹಿ ಹಂಚಲಾಯಿತು.

ಕಾರ್ಯಕ್ರಮದಲ್ಲಿ ಹೇರೂರು ಯುವ ಒಕ್ಕಲಿಗ ವೇದಿಕೆಯ ಅಧ್ಯಕ್ಷ ವಿಜೇಂದ್ರ ನಿಡವಾನೆ, ಖಜಾಂಚಿ ನಿರೀಕ್ಷಿತ್ ಎಸ್., ಸಂಚಾಲಕರಾದ ನಾಗರಾಜ್ ಹಾಗೂ ರಕ್ಷಿತ್ ಹೇರೂರು, ಸಂಘದ ಪದಾಧಿಕಾರಿಗಳು, ಹಿರಿಯ ಮುಖಂಡರು, ಗ್ರಾಮಸ್ಥರು ಹಾಗೂ ಯುವಕರು ಭಾಗವಹಿಸಿದ್ದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.