ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಕಳೆದ ಕೆಲವು ತಿಂಗಳುಗಳಿಂದ ಶೃಂಗೇರಿಯ ಗಾಂಧಿ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು, ಎಲ್ಲೆಂದರಲ್ಲಿ ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸುವ ಪರಿಣಾಮ ಸುಗಮ ರಸ್ತೆ ಸಂಚಾರಕ್ಕೆ ಸಹ ತೊಂದರೆ ಉಂಟಾಗುತ್ತಿದೆ.
ಕಳೆದ ವರ್ಷದವರೆಗೂ ಪಟ್ಟಣ ಪಂಚಾಯಿತಿ ಟೆಂಡರ್ ಪ್ರಕ್ರಿಯೆ ನಡೆಸಿ, ಖಾಸಗಿಯವರು ಪಾರ್ಕಿಂಗ್ ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದ ಕಾರಣದಿಂದ ರಸ್ತೆಯಲ್ಲಿ ಪಾರ್ಕಿಂಗ್ ಮಾಡಲು ಅವಕಾಶ ಇರುತ್ತಿರಲಿಲ್ಲ. ಆದರೆ ಗಾಂಧಿ ಮೈದಾನವನ್ನು ಹೊಳೆ ಖರಾಬು ಎಂಬ ಕಾರಣದಿಂದ ಈ ವರ್ಷದಿಂದ ಟೆಂಡರ್ ಪ್ರಕ್ರಿಯೆ ನಡೆಸದ ಪರಿಣಾಮ ಗಾಂಧಿ ಮೈದಾನದ ಪಾರ್ಕಿಂಗ್ ವ್ಯವಸ್ಥೆಗೆ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ.
ಶೃಂಗೇರಿ ಪಟ್ಟಣದ ಮುಖ್ಯ ರಸ್ತೆಯಾದ ಭಾರತೀ ಬೀದಿ, ಹರಿಹರ ಬೀದಿ ಹಾಗೂ ಸ್ವಾಗತ ಗೋಪುರ ಸಮೀಪದ ಟ್ರಾಫಿಕ್ ವ್ಯವಸ್ಥೆಯನ್ನು ನಿರ್ವಹಿಸಲೇ ಪೊಲೀಸ್ ಇಲಾಖೆ ಬಳಿ ಸಿಬ್ಬಂದಿ ಕೊರತೆ ಇರುವಾಗ ಗಾಂಧಿ ಮೈದಾನದ ಪಾರ್ಕಿಂಗ್ ವ್ಯವಸ್ಥೆಯನ್ನು ನೋಡುವುದು ಯಾರು, ಸರಿಪಡಿಸುವುದು ಹೇಗೆ, ಎಂಬುದು ಪ್ರಶ್ನೆಯಾಗಿದೆ.

ಜಿಲ್ಲಾಡಳಿತದ ನಿರ್ಧಾರದಿಂದ ಉಂಟಾಗಿರುವ ಇಂದಿನ ಪರಿಸ್ಥಿತಿಗೆ ಸೂಕ್ತ ಪರಿಹಾರ ನೀಡುವುದು ಸಹ ಜಿಲ್ಲಾಡಳಿತದ ಹೊಣೆ ಎಂಬುದನ್ನು ಜಿಲ್ಲಾಡಳಿತ ಮರೆಯಬಾರದು.















