ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದ ನೀಲಂ ಸೇಠ್ (ಮಾರ್ವಾಡಿ) ಅವರ ಕಾಳುಮೆಣಸು ಗೋಡೌನ್ನಲ್ಲಿ ದೊಡ್ಡ ಮಟ್ಟದ ಕಳ್ಳತನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಹೌದು, ಗೋಡೌನ್ನಲ್ಲಿದ್ದ ಸುಮಾರು 80 ಮೂಟೆ (1,800 ಕೆ.ಜಿ) ಕಾಳುಮೆಣಸು ಕಳವು ಮಾಡಿರುವುದು ಪತ್ತೆಯಾಗಿದೆ.
ಇದನ್ನೂ ಓದಿ: ಬಿಹಾರ ಚುನಾವಣೆ ಫಲಿತಾಂಶ; ಅಭೂತಪೂರ್ವ ಜಯದತ್ತ ಹೆಜ್ಜೆ ಹಾಕಿದ ಎನ್ಡಿಎ

ಖಚಿತ ಮಾಹಿತಿಯ ಮೇರೆಗೆ ಸರ್ಕಲ್ ಇನ್ಸ್ಪೆಕ್ಟರ್ ರಾಜಶೇಖರ್ ಅವರ ನೇತೃತ್ವದಲ್ಲಿ ಸಬ್ಇನ್ಸ್ಪೆಕ್ಟರ್ ಶ್ರೀನಾಥ್ ರೆಡ್ಡಿ ಹಾಗೂ ಪೊಲೀಸರು ದಾಳಿ ನಡೆಸಿ, ಬಾಪುನಗರದ ಸಬೀನಾ (35) ಎಂಬ ಮಹಿಳಾ ಆರೋಪಿಯನ್ನು ಬಂಧಿಸಿದ್ದಾರೆ. ಇನ್ನು ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಪಟ್ಟಣದ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿರುವ ನೀಲಮ್ ಸೇಠ್ ಎಂಬುವರ ಗೋದಾಮಿನ ಶೆಟರ್ ತೆರೆದು ಆರೋಪಿಗಳು ಕಾಳುಮೆಣಸಿನ ಚೀಲಗಳನ್ನು ನಿರಂತರವಾಗಿ ರಾತ್ರಿ ಕಳ್ಳತನ ಮಾಡುತ್ತಿದ್ದರು. ಒಟ್ಟು 1800 ಕೆ.ಜಿ ಕಾಳುಮೆಣಸು ಕಳವು ಮಾಡಿದ್ದಾರೆ ಎಂದು ಅ.19ರಂದು ಪೊಲೀಸರಿಗೆ ದೂರು ನೀಡಿದ್ದರು. ಗೋದಾಮಿಗೆ ಸಿಸಿಟಿವಿ ಕ್ಯಾಮರಾ ಅಳವಡಿಸಿರದ ಕಾರಣ ಆರೋಪಿಗಳ ಪತ್ತೆ ಕಾರ್ಯ ಪೊಲೀಸರಿಗೆ ಕಷ್ಟವಾಗಿತ್ತು. ಪಟ್ಟಣದ ವಿವಿಧ ರಸ್ತೆಯ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ಗೋಣಿಚೀಲದಲ್ಲಿ ಸರಕು ತುಂಬಿಸಿ ಕಾರಿನಲ್ಲಿ ಸಾಗಿಸುತ್ತಿರುವುದು ಕಂಡುಬಂದಿದೆ. ಅದರ ಜಾಡು ಹಿಡಿದು ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಇನ್ನಿಲ್ಲ
ಕಾರ್ಯಾಚರಣೆಯಲ್ಲಿ CPI ರಾಜಶೇಖರ್, SI ಶ್ರೀನಾಥ್ ರೆಡ್ಡಿ, ಶಶಿ ಹಾಗೂ ಪೊಲೀಸ್ ಸಿಬ್ಬಂದಿಗಳಾದ ವೈಭವ್, ಸಚಿನ್, ಮಹೇಂದ್ರ, ಮಲ್ಲಿಕಾರ್ಜುನ, ವಿನಯ್, ಮನು ಭಾಗವಹಿಸಿದ್ದರು. (ವರದಿ- ತನು ಕೊಟ್ಟಿಗೆಹಾರ)












