ಮೂಡಿಗೆರೆ: (ನ್ಯೂಸ್ ಮಲ್ನಾಡ್ ಇಂಪ್ಯಾಕ್ಟ್) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಂಕೆನಹಳ್ಳಿ ಹೋಗುವ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಪಕ್ಕದಲ್ಲಿರುವ ಒಣಗಿದ ಮರವೊಂದು ರಸ್ತೆಯಲ್ಲಿ ಸಂಚರಿಸುವ ವಾಹನಗಳ ಮೇಲೆ ಬೀಳುವ ಅಪಾಯದ ಅಂಚಿನಲ್ಲಿತ್ತು. ಈ ಕುರಿತಂತೆ ನಿನ್ನೆ ಬೆಳಗ್ಗೆ ನ್ಯೂಸ್ ಮಲ್ನಾಡ್ ನಲ್ಲಿ ವರದಿ ಮಾಡಲಾಗಿತ್ತು. ವರದಿಯಾಗುತ್ತಿದ್ದಂತೆ ಸ್ಪಂದಿಸಿದ ಸಿಬ್ಬಂದಿ ಒಣ ಮರವನ್ನು ತೆರವು ಮಾಡಿದ್ದಾರೆ.
ಹೆದ್ದಾರಿ ಪಕ್ಕದಲ್ಲಿಯೇ ಇತ್ತು ಅಪಾಯಕಾರಿ ಒಣ ಮರ:

ಮಾರ್ಗವಾಗಿ ವಿಲ್ಲಂಪುರಮ್ ದಿಂದ ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರ ಬಂಕೆನಹಳ್ಳಿ ಸಮೀಪ ಒಣಗಿದ ಬೃಹತ್ ಮರವೊಂದು ಅಪಾಯದ ಅಂಚಿನಲ್ಲಿತ್ತು. ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ ನೂರಾರು ವಾಹನಗಳು ಹಗಲು ರಾತ್ರಿ ಸಂಚರಿಸುತ್ತವೆ. ಮಳೆಗಾಲ ಪ್ರಾರಂಭವಾಗಿರುವುದರಿಂದ ಗಾಳಿ ಮಳೆ ಈ ಭಾಗದಲ್ಲಿ ಹೆಚ್ಚು ಇರುತ್ತದೆ. ಶಾಲಾ ಮಕ್ಕಳು, ಸಾರ್ವಜನಿಕರು ತಿರುಗಾಡುವ ರಸ್ತೆಯಾಗಿದೆ. ಗಾಳಿ-ಮಳೆ, ಗುಡುಗು ಸಹಿತ ಮಳೆ ಬಂದರೆ ಈ ಹಳೆಯ ಮರ ಬೀಳೋದು ಪಕ್ಕಾ. ಈ ಮರ ವಾಹನಗಳ ಮೇಲೆ, ಮನುಷ್ಯರ ಮೇಲೆ ಬಿದ್ದರೆ ಸಾವು ಗ್ಯಾರಂಟಿ ಎನ್ನುವಂತಿತ್ತು.

ಗ್ರಾಮಸ್ಥರಿಂದಲೂ ಮನವಿ
ಸಂಬಂಧಪಟ್ಟ ಅಧಿಕಾರಿಗಳು ಒಣ ಮರ ತೆರವುಗೊಳಿಸಬೇಕೆಂದು ಸ್ಥಳೀಯರಾದ ಬಂಕೆನಹಳ್ಳಿ ಸುಂದ್ರೇಶ್ ಹಾಗೂ ಇನ್ನಿತರರು ಒತ್ತಾಯಿಸಿದ್ದರು. ಈ ಕುರಿತು ನಿನ್ನೆ ನ್ಯೂಸ್ ಮಲ್ನಾಡ್ ವರದಿ ಮಾಡಿತ್ತು. ವರದಿಯಾದ ನಾಲ್ಕೇ ಗಂಟೆಯಲ್ಲಿ ಅರಣ್ಯ ಇಲಾಖೆ ಮರ ತೆರವು ಮಾಡಿದೆ.
ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಸಿಬ್ಬಂದಿಯಿಂದ ತೆರವು ಕಾರ್ಯ:

ವಲಯ ಅರಣ್ಯಾಧಿಕಾರಿ RFO ಚರಣ್ ಚಂಗಪ್ಪ ಮೂಡಿಗೆರೆ ಇವರ ಮಾರ್ಗದರ್ಶನ ದಲ್ಲಿ ಉಪ ವಲಯ ಅರಣ್ಯ ಅಧಿಕಾರಿ ಬಸವರಾಜ್, ಗಸ್ತು ಅರಣ್ಯ ಅಧಿಕಾರಿ ಅಭಿಜಿತ್ ಹಾಗೂ ಮೆಸ್ಕಾಂ ಪವರ್ ಮ್ಯಾನ್ ನಿಶಾಂತ್ ಹಾಗೂ ಇನ್ನಿತರರು, ಹಾಗೂ ಗ್ರಾಮಸ್ಥರಾದ ಬಂಕೆನಹಳ್ಳಿ ಸುಂದರೇಶ್ ಸೇರಿ ಒಣಗಿದ ಮರ ತೆರವುಗೊಳಿಸಿದ್ದಾರೆ.
ವಿಶೇಷ ವರದಿ: ತನು ಕೊಟ್ಟಿಗೆಹಾರ (ವರದಿಗಾರರು)












