ನರಸಿಂಹರಾಜಪುರ: (ನ್ಯೂಸ್ ಮಲ್ನಾಡ್ ವರದಿ) ತಾಲ್ಲೂಕಿನ ಕಣಿವೆ ಗ್ರಾಮದ ಸೂರುಗುಡಿಗೆಯ ದೇವಸ್ಥಾನದ ಸಮೀಪದ ಪೊದೆಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿದ್ದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಮಗುವಿನ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಯುವಕ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದರಿಂದ ಮಗು ಜನಿಸಿದೆ ಎಂದು ಆರೋಪಿಸಿದ್ದಾರೆ.
ತೀರ್ಥಹಳ್ಳಿಯ ಕನ್ನಂಗಿ ನಿವಾಸಿಯಾದ ಯುವಕ ಮದುವೆಯಾಗುವುದಾಗಿ ಮನೆಯವರಿಗೂ ಕೇಳಿದ್ದ. ಕುಟುಂಬದವರು ಒಪ್ಪಿಗೆ ನೀಡಿದ ಬಳಿಕ ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. ಈ ವೇಳೆ ಆಗಾಗ ಮನೆಗೆ ಬರುತ್ತಿದ್ದ ಆತ ದೈಹಿಕ ಸಂಪರ್ಕ ಹೊಂದಿದ್ದ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ನಂತರ ಗರ್ಭಿಣಿಯಾಗಿರುವ ವಿಷಯ ತಿಳಿಸಿದಾಗ ಯುವಕ ನಿರ್ಲಕ್ಷ್ಯ ತೋರಿಸಿ ಉಡಾಫೆಯಿಂದ ವರ್ತಿಸುತ್ತಿದ್ದ ಎನ್ನಲಾಗಿದೆ. ಮೇ 18ರಂದು ಸಂಜೆ ಹೊಟ್ಟೆ ನೋವು ಕಾಣಿಸಿಕೊಂಡು ಮಗು ಜನಿಸಿದ ಬಳಿಕ, ಸಮಾಜದ ಮರ್ಯಾದೆಗೆ ಅಂಜಿ ದೇವಸ್ಥಾನದ ಸಮೀಪ ಬುಟ್ಟಿಯಲ್ಲಿ ಮಗುವನ್ನು ಇರಿಸಿ ಬಂದಿರುವುದಾಗಿ ಮಹಿಳೆ ಒಪ್ಪಿಕೊಂಡಿದ್ದಾರೆ.
ಯುವಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಹಿಳೆ ಪೊಲೀಸರಿಗೆ ಮನವಿ ಮಾಡಿದ್ದಾರೆ.












