ಜಯಪುರ: (ನ್ಯೂಸ್ ಮಲ್ನಾಡ್ ವರದಿ) ದಸರಾ ಹಬ್ಬದ ಪ್ರಯುಕ್ತ ಮೂಡಿಗೆರೆಯಲ್ಲಿ ನಡೆದ ಮೂಡಿಗೆರೆ ಸೀಸನ್–02 ಜಿಲ್ಲಾ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಜಯಪುರದ ಅಲ್ಟಿಮೇಟ್ ಫಿಟ್‌ನೆಸ್ ಸಂಸ್ಥೆಯ ಕ್ರೀಡಾಪಟುಗಳು ಗಮನಾರ್ಹ ಸಾಧನೆ ಮಾಡುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಸ್ಪರ್ಧೆಯಲ್ಲಿ ಸಂಸ್ಥೆಯ ರಾಜೇಶ್ ಅವರು 65 ಕೆ.ಜಿ. ವಿಭಾಗದಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಲ್ಲದೆ, ಸಂಸ್ಥೆಯ ವಿನೀತ್ ಹಾಗೂ ಶಿವಕಾಶಿ ಅವರು ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಮತ್ತು ಪ್ರಮಾಣಪತ್ರಗಳನ್ನು ಪಡೆದು ಸಂಸ್ಥೆಯ ಗೌರವ ಹೆಚ್ಚಿಸಿದ್ದಾರೆ.
ಕ್ರೀಡಾಪಟುಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿದ ಜಯಪುರ ಅಲ್ಟಿಮೇಟ್ ಫಿಟ್‌ನೆಸ್ ಸಂಸ್ಥೆಯ ತರಬೇತುದಾರ ವಿನಯ್ ಅವರು, ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆ ಮಾಡಿದ ಎಲ್ಲರಿಗೂ ಶುಭಾಶಯ ಕೋರಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಸ್ಥೆಯ ತರಬೇತುದಾರ ವಿನಯ್ ಸೇರಿದಂತೆ ಅಲ್ಟಿಮೇಟ್ ಫಿಟ್‌ನೆಸ್ ಸಂಸ್ಥೆಯ ಯುವಕರು ಉಪಸ್ಥಿತರಿದ್ದರು.
(ವರದಿ: ಶಶಿ ಬೆತ್ತದಕೊಳಲು)
ದಸರಾ ಪ್ರಯುಕ್ತ ನಡೆದ ಜಿಲ್ಲಾ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆ: ಜಯಪುರದ ಅಲ್ಟಿಮೇಟ್ ಫಿಟ್‌ನೆಸ್ ಸಂಸ್ಥೆಗೆ ಪ್ರಶಸ್ತಿ














