ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಯಡದಾಳುವಿನಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆಯನ್ನು ಆಯೋಜಿಸಲಾಗಿದೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಶೃಂಗೇರಿ ಯೋಜನಾ ವ್ಯಾಪ್ತಿಯ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಮಹಿಳಾ ಜ್ಞಾನ ವಿಕಾಸ ಕೇಂದ್ರ, ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ, ನವಜೀವನ ಸಮಿತಿ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಶೃಂಗೇರಿ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭೆಯನ್ನು 25-01-2026 ಭಾನುವಾರ ಯಡದಾಳುವಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಆಯೋಜಿಸಲಾಗಿದೆ.
ಪರಮಪೂಜ್ಯ ಪದ್ಮವಿಭೂಷಣ ರಾಜರ್ಷಿ ಡಾ. ವಿರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಡಾ. ಹೇಮಾವತಿ ವಿ. ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಬೆಳಗ್ಗೆ 7.30 ಗಂಟೆಗೆ ಪೂಜೆ ಪ್ರಾರಂಭವಾಗಲಿದ್ದು, ವೃತಾಧಾರಿಗಳ ಸಂಕಲ್ಪ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವೈ.ಆರ್. ಮಂಜುನಾಥ್ (ಯಡದಾಳು) ವಹಿಸಲಿದ್ದಾರೆ. ದೀಪ ಪ್ರಜ್ವಲನೆಯನ್ನು ಹಿರಿಯರು ಹಾಗೂ ಪ್ರಗತಿಪರ ಕೃಷಿಕರಾದ ಶ್ರೀ ರಾಮಣ್ಣ ನಾಯ್ಕ (ಸೂರಗೋಡು) ನೆರವೇರಿಸಲಿದ್ದಾರೆ. ಧಾರ್ಮಿಕ ಉಪನ್ಯಾಸವನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀ ಡಾ. ಮಂದಾರ್ ಜೈನ್ (ಚಿಕ್ಕಮಗಳೂರು) ಹಾಗೂ ಶಾಲಾ ಉಪನ್ಯಾಸಕಿ ಶ್ರೀಮತಿ ಜಯಶ್ರೀ ಗಣೇಶ್ ಯು.ಎಸ್. ನೀಡಲಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದ್ದು, 1.30ಕ್ಕೆ ಅನ್ನಸಂತರ್ಪಣೆ, 2 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪೂಜೆಯ ಧಾರ್ಮಿಕ ವಿಧಿ ವಿಧಾನಗಳನ್ನು ಶ್ರೀ ನಾಗರಾಜ್ ಭಟ್ (ಮನ್ನಾಡ್) ಅವರ ಪೌರೋಹಿತ್ಯದಲ್ಲಿ ನೆರವೇರಲಿದ್ದು ಪೂಜೆಗೆ ಕುಳಿತುಕೊಳ್ಳುವವರು ಬೆಳಗ್ಗೆ 7 ಗಂಟೆಗೆ ಪೂಜಾ ಸ್ಥಳದಲ್ಲಿ ಕಡ್ಡಾಯವಾಗಿ ಹಾಜರಾಗಬೇಕು. ಹಾಗೂ ಪೂಜೆಗೆ ಭಾಗವಹಿಸುವವರು ಅಕ್ಕಿ, ತೆಂಗಿನಕಾಯಿ, ಬಾಳೆಎಲೆ, ವೀಳ್ಯದೆಲೆ, ಅಡಿಕೆ, ನಾಣ್ಯ ಸೇರಿದಂತೆ ಅಗತ್ಯ ಪೂಜಾ ಸಾಮಗ್ರಿಗಳನ್ನು ತರಬೇಕೆಂದು ಆಯೋಜಕರು ತಿಳಿಸಿದ್ದಾರೆ.












