ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ‘ಕಾಕ್ರೋಚ್ ಪಾರ್ಟಿ ಆಫ್ ಇಂಡಿಯಾ’ ಸಾಮಾಜಿಕ ಜಾಲತಾಣದ ಟ್ರೆಂಡ್ಗೆ ಪ್ರತಿಯಾಗಿ, ಈಗ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಹೊಸ ಕೌಂಟರ್ ಪಾರ್ಟಿಯೊಂದು ಜನ್ಮತಾಳಿದೆ.
ದೇಶಾದ್ಯಂತ ಕಾಕ್ರೋಚ್ ಪಾರ್ಟಿ ಟ್ರೆಂಡ್ ಆಗುತ್ತಿರುವ ಹಿನ್ನೆಲೆಯಲ್ಲಿ, ಅದಕ್ಕೆ ಕೌಂಟರ್ ನೀಡಲು ಮಲೆನಾಡು ಭಾಗದಲ್ಲಿ ‘ಲಕ್ಷ್ಮಣರೇಖೆ’ ಹಾಗೂ ‘ಹಿಟ್’ (HIT) ಪಕ್ಷವನ್ನು ಸ್ಥಾಪಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಮೂಲದ ಜಗದೀಶ್ಚಂದ್ರ ಎಂಬವರು ಈ ‘ಹಿಟ್’ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಈ ವಿಭಿನ್ನ ಕೌಂಟರ್ ಪಕ್ಷಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಲಕ್ಷಾಂತರ ಜನರು ಹಿಟ್ ಪಾರ್ಟಿಯನ್ನು ಫಾಲೋ ಮಾಡಲು ಆರಂಭಿಸಿದ್ದಾರೆ. ಇದರೊಂದಿಗೆ ಇಂಟರ್ ನೆಟ್ ನಲ್ಲಿ ಜಿರಳೆಗಳಿಗೆ ನಾವ್ಯಾರು ಹೆದರುವುದಿಲ್ಲ’ ಎಂಬ ಹೊಸ ಟ್ರೆಂಡಿಂಗ್ ಅಭಿಯಾನವೂ ಮುನ್ನೆಲೆಗೆ ಬಂದಿದೆ.
‘ಮನೆಗಳಿಗೆ ಜಿರಲೆಗಳು ಬಂದರೆ ಅವುಗಳನ್ನು ಶಮನ ಮಾಡಲು ನಾವು ಹಿಟ್ ಅಥವಾ ಲಕ್ಷ್ಮಣರೇಖೆ ಬಳಸಲು ಸಿದ್ಧರಿದ್ದೇವೆ’ ಎಂದು ಜಗದೀಶ್ಚಂದ್ರ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ದೇಶದಲ್ಲಿ ಕಾಕ್ರೋಚ್ ಪಾರ್ಟಿ ಅಸ್ತಿತ್ವದಲ್ಲಿ ಇರುವಷ್ಟು ದಿನವೂ ಹಿಟ್ ಪಕ್ಷದ ಕಾರ್ಯಕರ್ತರು ಕಡ್ಡಾಯವಾಗಿ ಲಕ್ಷ್ಮಣರೇಖೆ ಹಾಗೂ ಹಿಟ್ ಔಷಧಿಯನ್ನು ಬಳಸಬೇಕು ಎಂದು ಅವರು ತಮ್ಮ ಬೆಂಬಲಿಗರಿಗೆ ಸೂಚನೆ ನೀಡಿದ್ದಾರೆ. ಸದ್ಯ ಮಲೆನಾಡಿನ ಈ ಹಾಸ್ಯಭರಿತ ಡಿಜಿಟಲ್ ರಾಜಕೀಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.












